ಸಾರ್ವಜನಿಕರ ಅಹವಾಲು ತಾಳ್ಮೆಯಿಂದ ಆಲಿಸಿ

KannadaprabhaNewsNetwork |  
Published : Apr 03, 2026, 02:00 AM IST
ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್‌ಐ ಎಂ.ಐ. ಪಠಾಣ ಪೊಲೀಸ ಧ್ವಜಗಳನ್ನು ನಿವೃತ್ತ ಪಿಎಸ್‌ಐ ಎಂ.ಐ. ಪಠಾಣ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

1965 ಏ. 2ರಂದು ಕರ್ನಾಟಕ ಪೊಲೀಸ್ ಪಡೆ ರಚನೆಯಾದ ನೆನಪಿಗಾಗಿ ಮತ್ತು ಪೊಲೀಸರ ಸೇವೆ, ಶೌರ್ಯ ಹಾಗೂ ತ್ಯಾಗ ಗೌರವಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಘಟಕಗಳಲ್ಲಿ ಪೊಲೀಸ್ ಧ್ವಜದಿನ ಆಚರಿಸಲಾಗುತ್ತದೆ.

ಹುಬ್ಬಳ್ಳಿ:

ಸಾರ್ವಜನಿಕರು ತಮ್ಮ ಅಹವಾಲು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಾಗ ಅವರ ಸಮಸ್ಯೆಯನ್ನು ತಾಳ್ಮೆಯಿಂದ ವಿಚಾರಿಸಿ ಸ್ಪಂದಿಸಬೇಕು ಎಂದು ನಿವೃತ್ತ ಪಿಎಸ್‌ಐ ಎಂ.ಐ. ಪಠಾಣ ಹೇಳಿದರು.

ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಗುರುವಾರ ಆಯೋಜಿಸಿದ್ದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

1965 ಏ. 2ರಂದು ಕರ್ನಾಟಕ ಪೊಲೀಸ್ ಪಡೆ ರಚನೆಯಾದ ನೆನಪಿಗಾಗಿ ಮತ್ತು ಪೊಲೀಸರ ಸೇವೆ, ಶೌರ್ಯ ಹಾಗೂ ತ್ಯಾಗ ಗೌರವಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಘಟಕಗಳಲ್ಲಿ ಪೊಲೀಸ್ ಧ್ವಜದಿನ ಆಚರಿಸಲಾಗುತ್ತದೆ. ಪೊಲೀಸ್‌ ಧ್ವಜ ಮಾರಾಟದಿಂದ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುತ್ತದೆ ಎಂದರು.

ಪೊಲೀಸರು ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಕಾನೂನು ಪಾಲನೆ, ಸಾರ್ವಜನಿಕ ಆಸ್ತಿ-ಪಾಸ್ತಿ ಸಂರಕ್ಷಣೆ ಜತೆಗೆ ಜನ ಜೀವನದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಅತೀ ಅವಶ್ಯಕವಾಗಿದೆ. ಇದರೊಂದಿಗೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಹೊಂದಬೇಕಿದೆ ಎಂದರು.

ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ನಾವು ಚಿರ ಋಣಿಯಾಗಿರಬೇಕು. ಅವರು ಹಗಲಿರುಳು, ಮಳೆ, ಚಳಿ ಎನ್ನದೇ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ರವಿಕುಮಾರ ನಾಯ್ಕ ಮಾತನಾಡಿದರು. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ವಾಗತಿಸಿ, ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಪೊಲೀಸ ಧ್ವಜಗಳನ್ನು ಬಿಡುಗಡೆ ಮಾಡಿ ವಿತರಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಉದ್ಯಮಿ ವಿ.ಎಸ್.ವಿ. ಪ್ರಸಾದ್ ₹1,11,600, ಶಾಂತರಾಜ ಪೋಳ ₹1 ಲಕ್ಷ, ನಿವೃತ್ತ ಡಿವೈಎಸ್‌ಪಿ ವೀರೇಶ ಬೆಳವಡಿ ₹50 ಸಾವಿರ ಹಾಗೂ ವಿಠ್ಠಲ ಲದ್ವಾ ₹50 ಸಾವಿರ ಮೊತ್ತದ ಚೆಕ್ ನೀಡಿದರು. ಪರೇಡ್ ಕಮಾಂಡರ್ ಆರ್‌ಎಸ್‌ಐ ಸಂತೋಷ ಭೋಜಪ್ಪಗೋಳ ನೇತೃತ್ವದಲ್ಲಿ ಪೊಲೀಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಡಿಸಿಪಿ ರವೀಶ ಸಿ.ಆರ್, ಎಸಿಪಿ ಶಿವಾನಂದ ಚಲವಾದಿ, ಉಮೇಶ ಚಿಕ್ಕಮಠ, ಪ್ರಶಾಂತ ಸಿದ್ಧನಗೌಡರ, ನಿವೃತ್ತ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು. ಇನ್‌ಸ್ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಶ್ರುತಿ ಎನ್.ಎಸ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು-ಕುಲಪತಿ ಪಾಟೀಲ್‌
ಮಹಿಳೆಯರು ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಪ್ರಗತಿಯ ಸೂಚಕ