ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠದ ವತಿಯಿಂದ ಮುಧೋಳ ತಾಲುಕಿನ ಕನಸಗೇರಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮನೆ ಮನದಲ್ಲಿ ವೇಮನರ 180ನೇ ಮಾಸಿಕ ತತ್ವ ಚಿಂತನ ಕಾರ್ಯಕ್ರಮ ಉದ್ಘಾಟಿಸಿ, ತೊರೆಯಬೇಕು ಊರ ವಿರಾಮವಿರದಾಗ...ಎಂಬ ವಚನ ಕುರಿತು ಮಾತನಾಡಿದರು.
ಮನುಷ್ಯ ಬರೀ ಸಂಸಾರದ ಜಂಜಾಟದಲ್ಲಿ ಸಿಲುಕಿ ಮನಸ್ಸಿನ ನೆಮ್ಮದಿ ಕಳೆದುಕೊಂಡು ದುಃಖಿತನಾಗಿದ್ದಾನೆ. ಸಮಾಧಾನ, ಶಾಂತಿ, ನೆಮ್ಮದಿ ಇಲ್ಲದಂತಾಗಿ ಚಿಂತೆಯಲ್ಲಿದ್ದಾನೆ. ಇದಕ್ಕೆ ಕೊನೆಹಾಡಿ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಸಂತರು, ಮಹಾತ್ಮರ ನುಡಿಗಳನ್ನು ಆಲಿಸಬೇಕು ಎಂದು ಗುರೂಜಿ ಹೇಳಿದರು.ಮಹಾಯೋಗಿ ವೇಮನರು ತಮ್ಮ ಬದುಕಿನ ಅನುಭವದ ಮಾತುಗಳನ್ನೇ ವಚನಗಳ ಮೂಲಕ ಮನುಕುಲಕ್ಕೆ ಅರುಹಿದ್ದು, ಅವುಗಳಲ್ಲಿ ಜೀವನದ ಸತ್ಯವೇ ಅಡಗಿದೆ ಎಂದ ಅವರು, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರಲ್ಲಿನ ಭಕ್ತಿ, ವೈರಾಗ್ಯ ಅವರನ್ನು ದೈವತ್ವಕ್ಕೆ ಏರಿಸಿದವು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ದಾದನಟ್ಟಿ ಶಿವಾನಂದ ಮಠದ ನಿಜಾನಂದ ಸ್ವಾಮೀಜಿ, ಮನುಷ್ಯತ್ವದ ಬದುಕು ನಮ್ಮದಾಗಬೇಕು. ಪ್ರಪಂಚದಲ್ಲಿದ್ದುಕೊಂಡೇ ಪಾರಮಾರ್ಥ ಸಾಧಿಸಿ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನ ವಚನ ಪಠಣ ಮಾಡಿದರು. ವಕೀಲ ಮಹಾದೇವ ಯರಡ್ಡಿ ಸ್ವಾಗತಿಸಿದರು. ಪಶು ವೈದ್ಯಾಧಿಕಾರಿ ಡಿ.ಎಂ.ಬೆಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಚ್.ಬಿ.ಗೋಣಿ ವಂದಿಸಿದರು.