ಕನ್ನಡಪ್ರಭ ವಾರ್ತೆ ಚವಡಾಪುರ
ಕನ್ನಡ ಭಾಷೆಗೆ, ಸಾಹಿತ್ಯಕ್ಕೆ ಇರುವ ಚರಿತ್ರೆ ಬಹಳ ಭವ್ಯವಾಗಿದೆ, ಆದರೆ ಇಂದು ಸಾಹಿತ್ಯ, ಪುಸ್ತಕಗಳನ್ನು ಓದುವವರ ಕೊರತೆಯಿಂದ ಸಾಹಿತ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಶಾಸಕ ಎಂ.ವೈ ಪಾಟೀಲ್ ಕಳವಳ ವ್ಯಕ್ತ ಪಡಿಸಿದರು.ಅಫಜಲ್ಪುರ ಪಟ್ಟಣದ ಗುರು ಮಳೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಅಫಜಲ್ಪುರ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾಜನ್ ವರದಿಯ ಯಥಾವತ್ ಜಾರಿಯಾಗಬೇಕು, ಬಚಾವತ್ ತೀರ್ಪಿನಂತೆ ನಮ್ಮ ಪಾಲಿನ ನೀರು ಸಿಗುವಂತಾಗಬೇಕು, ಕನ್ನಡ ಭಾಷಿಕರು ಹೆಚ್ಚಿರುವ ನೆರೆ ರಾಜ್ಯಗಳ ಪ್ರಾಂತಗಳು ಕರ್ನಾಟಕಕ್ಕೆ ಸೇರಬೇಕು. ಇವೆಲ್ಲವು ಆಗಬೇಕಾದರೆ ಕನ್ನಡಿಗರು ಕನ್ನಡಕ್ಕಾಗಿ ಒಂದಾಗಬೇಕು. ಕನ್ನಡಿಗರು ಒಂದಾದರೆ ನಮ್ಮನ್ನು ತಡೆಯುವ ಶಕ್ತಿ ಇಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ತ ಇನ್ನಷ್ಟು ಕ್ರಿಯಾಶೀಲವಾಗಬೇಕು. ಸ್ಥಳೀಯವಾಗಿರುವ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಪ್ರತಿಭಾವಂತರಿಗೆ ಅವಕಾಶಗಳು ಮತ್ತು ವೇದಿಕೆಗಳನ್ನು ಕಲ್ಪಿಸುವ ಕೆಲಸ ಮಾಡಿ ನಾವು ನಮ್ಮಿಂದಾದ ಸಹಾಯ, ಸಹಕಾರ ಮಾಡಲು ಸಿದ್ಧರಿದ್ದೇವೆ ಎಂದರು.ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ.ರಾವ್ ತಮ್ಮ ಅಧ್ಯಕ್ಷೀಯ ಭಾಷಣ ಮತ್ತು ಹಕ್ಕೊತ್ತಾಯಗಳನ್ನು ಮಂಡಿಸಿದರು. ಆದರೆ ಸರ್ವಾಧ್ಯಕ್ಷರ ಭಾಷಣದಲ್ಲಿ ಬೆಳಗಾವಿ ಪದವನ್ನು ಮರಾಠಿಯಲ್ಲಿ ಕರೆಯುವಂತೆ ಬೆಳಗಾಂವ ಎಂದು ಬರೆದಿದ್ದು ನೆರೆದಿದ್ದವರಲ್ಲಿ ಪ್ರಶ್ನೆ ಹುಟ್ಟುವಂತೆ ಮಾಡಿತಲ್ಲದೆ ತಮ್ಮ ಭಾಷಣವನ್ನು ಇಡಿಯಾಗಿ ಓದದೆ ಕೊನೆಯ ಎರಡು ಪುಟಗಳನ್ನು ಓದಿ ಮುಗಿಸದೆ ಹಕ್ಕೋತ್ತಾಯಗಳನ್ನು ಮಂಡಿಸಿ ಅವಸರಿಸಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು.
ಕಾರ್ಯಕ್ರಮ ಉದ್ಘಾಟನೆ ವಿಳಂಬ:ಕಸಾಪ ತಾಲೂಕು ಅಧ್ಯಕ್ಷ ಪ್ರಭು ಫುಲಾರಿ ಪ್ರಾಸ್ತಾವಿಕ ಮಾತನಾಡಿದರು. ಬೆಳಗ್ಗೆ 8.30ಕ್ಕೆ ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ಜರುಗಿತು. ನಂತರ ಬಸವೇಶ್ವರ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ ಅವರು ಸಮ್ಮೇಳನಾಧ್ಯಕ್ಷರ ಮೇರವಣಿಗೆಗೆ ಚಾಲನೆ ನೀಡಿದರು. ಮೇರವಣಿಗೆಯಲ್ಲಿ ಕಾಲ ತಂಡಗಳು ಭಾಗಿಯಾಗಿದ್ದವು. ಬೆಳಿಗ್ಗೆ 11.30ಕ್ಕೆ ಉದ್ಘಾಟನೆಯಾಗಬೇಕಿದ್ದ ಸಮ್ಮೇಳನ ಶಾಸಕರ ಆಗಮನ ವಿಳಂಬವಾಗಿದ್ದಕ್ಕೆ 1.30ಕ್ಕೆ ಉದ್ಘಾಟನೆಗೊಂಡಿತು. ಅಲ್ಲದೆ ಪ್ರಚಾರದ ಕೊರತೆಯಿಂದ ಜನ ಬಾರದೆ ಸಭಾಂಗಣದಲ್ಲಿ ಖಾಲಿ ಕುರ್ಚಿಗಳು ಎದ್ದು ಕಾಣುವಂತಾಯಿತು. ಅಲ್ಲದೆ ಕಲಾ ತಂಡಗಳಿಂದಾಗಿ ಮತ್ತು ಶಾಲಾ ಮಕ್ಕಳಿಂದಾಗಿ ವೇದಿಕೆ ಮುಂದಿನ ಕುರ್ಚಿಗಳಲ್ಲಿ ಜನ ಕಾಣುವಂತಾಯಿತು.
ಪುಸ್ತಕಗಳ ಬಿಡುಗಡೆ: ಕಸಾಪ ಗೌರವ ಕಾರ್ಯದರ್ಶಿ ಡಾ. ಸಂಗಣ್ಣ ಎಂ ಸಿಂಗೆ ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ಕಾವ್ಯ ಸಂಗಮ ಸ್ಮರಣ ಸಂಚಿಕೆ, ಸೈಂಧವ ರಾಜಾ ಪೌರಾಣಿಕ ನಾಟಕ, ಅಫಜಲ್ಪುರದ ಸಾಹಿತ್ಯ ಸಾಧಕರು ಪುಸ್ತಕಗಳು, ಬಸವರಾಜ ಹೂಗಾರ ಅವರ ಕನ್ನಡ ಕಹಳೆ, ಪ್ರಭಾವತಿ ಮೇತ್ರಿ ಅವರ ಸೂರ್ಯೋದಯದ ಮಾತು ಪುಸ್ತಕಗಳು ಬಿಡುಗಡೆಗೊಂಡವು.ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ, ಡಾ. ಎಂ.ಎಸ್ ಜೋಗದ್, ಡಾ. ಹನುಮಂತ್ರಾವ ದೊಡ್ಮನಿ, ಡಾ. ಶರಣಬಸಪ್ಪ ದಾಮಾ, ಶಿವುಕುಮಾರ ನಾಟಿಕಾರ, ಪಪ್ಪು ಪಟೇಲ್, ಮಹಾಂತೇಶ ಪಾಟೀಲ್, ಬಸಣ್ಣ ಗುಣಾರಿ, ಚಂದು ಕರ್ಜಗಿ, ಶಂಕು ಮ್ಯಾಕೇರಿ, ದಯಾನಂದ ದೊಡ್ಮನಿ, ಬಾಬುರಾವ್ ಜಮಾದಾರ, ಭೀಮಾಶಂಕರ ಹೊನ್ನಕೇರಿ, ತಹಸೀಲ್ದಾರ ಸಂಜೀವಕುಮಾರ ದಾಸರ್, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ಸೇರಿದಂತೆ ಕಸಾಪ ಪದಾಧಿಕಾರಿಗಳು ಇದ್ದರು.