ಜಾಲತಾಣ ಸಂವಹನ ಟ್ರೆಂಡ್‌ಗೆ ಸಾಹಿತ್ಯಿಕ ಆಯಾಮ ಅಗತ್ಯ: ನಾಗತಿಹಳ್ಳಿ

KannadaprabhaNewsNetwork |  
Published : Jan 01, 2025, 12:01 AM IST
ವಿಶ್ವಮಾನವ | Kannada Prabha

ಸಾರಾಂಶ

ಅರಿವಿನ ಹಾಡುಗಾರ ನಾದ ಮಣಿನಾಲ್ಕೂರು ಕುವೆಂಪು ಹಾಡುಗಳನ್ನು ಹಾಡಿದರು. ಎಸ್.ಡಿ.ಎಂ ಕಲಾ ಕೇಂದ್ರದ ಯಶವಂತ ಬೆಳ್ತಂಗಡಿ ನಿರ್ದೇಶಿತ ‘ನಾಗಿ ಕಥನ ಕವನ ರೂಪಕ’ವನ್ನು ಎಸ್‌ಡಿಎಂ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಹೊಸ ಕಾಲದ ಸಾಮಾಜಿಕ ಜಾಲತಾಣಗಳ ಸಂವಹನದ ಟ್ರೆಂಡ್‌ಗೆ ಸಂಸ್ಕೃತಿ ನಿಷ್ಠ ಸಾಹಿತ್ಯಕ ಆಯಾಮ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತಿ, ಖ್ಯಾತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೋಮವಾರ ಕುವೆಂಪು ಅವರ ೧೨೦ನೇ ಜನ್ಮದಿನೋತ್ಸವದ ಪ್ರಯುಕ್ತ ಆಯೋಜಿತವಾದ ‘ವಿಶ್ವ ಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಕುವೆಂಪು ಅವರ ‘ಸಾಹಿತ್ಯಕ ಮತ್ತು ವೈಚಾರಿಕ ಕೊಡುಗೆಗಳ’ ಕುರಿತು ಅವರು ಉಪನ್ಯಾಸ ನೀಡಿದರು. ಹೊಸ ಕಾಲದ ಸಂವಹನದ ಕ್ರಮಗಳು ಬದಲಾಗಿವೆ. ಸೋಷಿಯಲ್ ಮೀಡಿಯಾ ವೇದಿಕೆಗಳು ಸರಕು ಸಂಸ್ಕೃತಿಯ ವಿಸ್ತರಣೆಯ ರೂಪಗಳಾಗಿ ವಿಜೃಂಭಿಸುತ್ತಿವೆ. ವೀಕ್ಷಕರನ್ನು ಉತ್ಪನ್ನಗಳನ್ನಾಗಿ ಗ್ರಹಿಸಿ ಅದಕ್ಕೆ ತಕ್ಕಂತೆ ಜಾಳುಜಾಳಾದ ಕಂಟೆಂಟ್‌ಗಳನ್ನು ನೀಡುವ ಪ್ರವೃತ್ತಿ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಈ ವೇದಿಕೆಗಳಿಗೆ ಸಾಹಿತ್ಯಕ, ಸಾಂಸ್ಕೃತಿಕ ಶಕ್ತಿ ನೀಡಬೇಕು. ನೋಡುವ, ಓದುವ ಮತ್ತು ಗೀಳಾಗಿಸಿಕೊಂಡು ಅವಲಂಬಿತವಾಗುವರಿಗಿಂತ ಸಾಹಿತ್ಯ, ಸಂಸ್ಕೃತಿ ನೆಲೆಯಲ್ಲಿ ಗ್ರಹಿಸುವ ಸಹೃದಯರನ್ನು ಸೃಷ್ಟಿಸುವ ಅಗತ್ಯವಿದೆ. ಈ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳು ಸಂಸ್ಕರಿತಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ ಕುಮಾರ ಹೆಗ್ಡೆ, ವಿದ್ಯಾರ್ಥಿಗಳು ಕುವೆಂಪು ಬರಹಗಳನ್ನು ಓದುವ ಹಾಗೂ ಅವರ ವಿಚಾರಧಾರೆಗಳಿಗೆ ಒಗ್ಗಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಅರಿವಿನ ಹಾಡುಗಾರ ನಾದ ಮಣಿನಾಲ್ಕೂರು ಕುವೆಂಪು ಹಾಡುಗಳನ್ನು ಹಾಡಿದರು. ಎಸ್.ಡಿ.ಎಂ ಕಲಾ ಕೇಂದ್ರದ ಯಶವಂತ ಬೆಳ್ತಂಗಡಿ ನಿರ್ದೇಶಿತ ‘ನಾಗಿ ಕಥನ ಕವನ ರೂಪಕ’ವನ್ನು ಎಸ್‌ಡಿಎಂ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಸೋನಿಯ ಯಶೋವರ್ಮಾ ಇದ್ದರು. ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ವಂದಿಸಿದರು

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ