ಕುಮಟಾ: ಸಾಹಿತ್ಯ ಜೀವನ, ಸಮಾಜಕ್ಕೆ ಹಿಡಿದ ಕನ್ನಡಿ. ಜೀವನದ ಬಗೆಗಿನ ಲೋಕಾನುಭವ ಹೇಳಲು ಸಾಹಿತಿ ತನ್ನದೇ ಆದ ಶೈಲಿ ಬಳಸುತ್ತಾರೆ. ಇದು ವ್ಯಕ್ತಿಯ ವಿಶೇಷತೆ ತೋರುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು ಚುಟುಕು ಸಾಹಿತ್ಯ ಪರಿಷತ್ ಕುಮಟಾ ಘಟಕದವರು ಪುರಭವನದಲ್ಲಿ ಹಮ್ಮಿಕೊಂಡಿದ್ದ ಕುಮಟಾ ತಾಲೂಕಾ 4ನೇ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಸಾಹಿತಿಗಳ ಚುಟುಕು ಹಾಗೂ ಪರಿಚಯ ಒಳಗೊಂಡ ಕುಮಟಾ ಮುಕುಟ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಮಾತನಾಡಿ, ಹೇಳಬೇಕಾದ ಎಲ್ಲ ವಿಚಾರಗಳನ್ನು ನಾಲ್ಕು ಸಾಲುಗಳಲ್ಲಿ ಕಟ್ಟಿಕೊಡುವ ಕಾರ್ಯವನ್ನು ಚುಟುಕುಗಳು ಮಾಡುತ್ತದೆ ಎಂದರು.
ವಿಜಯಲಕ್ಷ್ಮೀ ಹೆಗಡೆಯವರ ''''''''ಗಝಲ್ ನಗರಿಯಲ್ಲಿ ಹೆಜ್ಜೆಗಳ ಗುರುತು'''''''' ಕೃತಿಯನ್ನು ಗಣೇಶ ಪ್ರಸಾದ ಪಾಂಡೇಲು ಲೋಕಾರ್ಪಣಗೊಳಿಸಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ವಿ. ನಾಯ್ಕ, ಕಸಾಪ ರಾಜ್ಯ ಸಲಹಾ ಸಮಿತಿ ಸದಸ್ಯ ಜನಾರ್ಧನ ನಾಯ್ಕ, ಮಾಜಿ ಯೋಧ ಪ್ರಕಾಶ ಎಸ್. ಮಡಿವಾಳ, ಶಿಕ್ಷಕ-ಪತ್ರಕರ್ತ ಗಣೇಶ ಜೋಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸರ್ವಾಧ್ಯಕ್ಷತೆ ವಹಿಸಿದ್ದ ತಿಗಣೇಶ ಮಾಗೋಡ ಮಾತನಾಡಿ, ಬದಲಾವಣೆಯ ವೇಗಕ್ಕೆ, ಸಮಯದ ಕೊರತೆಯಾಗಿ ಎಲ್ಲವೂ ಮೊಟಕಾಗಿಸುವ ಸಂಸ್ಕೃತಿ ಚುಟುಕುಗಳ ಉಗಮಕ್ಕೆ ಕಾರಣವಾಯ್ತು. ಕಡಿಮೆ ಅಕ್ಷರದಲ್ಲಿ ವಿಚಾರಗಳನ್ನು ಬಂಧಿಸಿ, ಹೊಂದಿಸಿ, ಸಂಧಿಸಿ ಕೊಡುವಲ್ಲಿ ಚುಟುಕುಗಳು ಗೆಲ್ಲುತ್ತವೆ. ಮೊನಚಾದ ಪ್ರಸ್ತುತಿ ಎದೆಯಾಳಕ್ಕೆ ಬೇಗ ಇಳಿಯುತ್ತದೆ. ಶತಾಯುಷ್ಯದ ಬದುಕು, ಕ್ಷೀಣಾಯುಷ್ಯಕ್ಕೆ ಹೊಂದಿಕೊಂಡಾಗ, ಕಣದಲ್ಲಿ, ಮಣ್ಣಕಾಣುವ ಜಾಣ್ಮೆ ನಮ್ಮದಾಯಿತೆನಿಸುತ್ತದೆ. ಶಾಲಿಗಾಗಿ ಸಾಲಿಗೆ, ಸಾಲುಗಳ ಸುತ್ತಿ ಓದನ್ನನ್ನು ಸೋಲುವಂತೆ ಮಾಡಿದ ನೀಳಸಾಹಿತ್ಯಗಳು ನಾಳೆಗಳ ಕಾಣದೇ ಪುಸ್ತಕಗಳಲ್ಲಿ ಮಲಗುವಂತಾಗಿ ತುಂಡು ಸಾಲುಗಳು ಪುಂಡುವೇಶದಂತೆ ಪ್ರವೇಶಿಸಿ ಪ್ರದರ್ಶನ ಯೋಗ್ಯವೆನಿಸಿ ಮನಸು ಗೆದ್ದಿವೆ ಎಂದರು.
ಪುರಸಭೆಯ ಅಧ್ಯಕ್ಷೆ ಸುಮತಿ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ಚುಟುಕು ಗೋಷ್ಠಿ, ಚುಟುಕು ವಾಚನ ಗೋಷ್ಠಿಗಳು ನಡೆದವು. ನಾ ಕಂಡಂತೆ ಸರ್ವಾಧ್ಯಕ್ಷರು ಗೋಷ್ಠಿಯಲ್ಲಿ ಮಂಜುನಾಥ ಗಾಂವ್ಕರ ತಿಗಣೇಶರ ವ್ಯಕ್ತಿತ್ವ ಪರಿಚಯಿಸಿದರು. ಸುಮಾರು 25ಕ್ಕೂ ಹೆಚ್ಚಿನ ಸಾಹಿತಿಗಳು ಚುಟುಕುಗಳನ್ನು ವಾಚಿಸಿದರು. ಉದ್ಯಮಿ ವಸಂತ ರಾವ್, ಕಸಾಪ ತಾಲೂಕಾಧ್ಯಕ್ಷ ಪ್ರಮೋದ ನಾಯ್ಕ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.