ಕನ್ನಡಪ್ರಭ ವಾರ್ತೆ ಪುತ್ತೂರು
ವಿದ್ವಾಂಸ, ಸಾಹಿತಿ, ವಿಮರ್ಶಕ, ಅರ್ಥಧಾರಿ, ವಾಗ್ಮಿ, ಪರಿಸರವಾದಿ ಲಕ್ಷ್ಮೀಶ ತೋಳ್ಪಾಡಿ ಅವರ ‘ಕನ್ನಡದ ಮಹಾಭಾರತ ಅನುಸಂಧಾನ ಭಾರತಯಾತ್ರೆ’ ಪ್ರಬಂಧಕ್ಕೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ತೋಳ್ಪಾಡಿ ಅವರು ದ.ಕ. ಜಿಲ್ಲೆಯ ಪುತ್ತೂರಿನವರು. ಶಾಂತಿಗೋಡು ಗ್ರಾಮದ ಕೆಂಬ್ಲಾಜೆ ಎಂಬಲ್ಲಿ ತನ್ನ ಪತ್ನಿ ವಿಜಯಲಕ್ಷ್ಮೀ ಮತ್ತು ಮಕ್ಕಳಾದ ಪರೀಕ್ಷಿತ್ ತೋಳ್ಪಾಡಿ ಮತ್ತು ಮಾಳವಿಕರೊಂದಿಗೆ ವಾಸವಾಗಿದ್ದಾರೆ.ಅವರು ಶಾಂತಿಗೋಡು ವಿಷ್ಣುಮೂರ್ತಿ ತೋಳ್ಪಾಡಿ-ರತ್ನಮ್ಮ ದಂಪತಿ ಪುತ್ರ ತೋಳ್ಪಾಡಿ 1947ರ ಸೆ.12ರಂದು ಜನಿಸಿದರು. ಪುತ್ತೂರು ಬೋರ್ಡು ಹೈಸ್ಕೂಲ್, ಮಂಗಳೂರು ಸರ್ಕಾರಿ ಕಾಲೇಜ್‌ನಲ್ಲಿ ಶಿಕ್ಷಣ ಪೂರೈಸಿ ಬಳಿಕ ಶ್ರೀ ವಿದ್ಯಾಭೂಷಣರ ಜೊತೆಗೆ ಮತ್ತು ಶ್ರೀ ಪೇಜಾವರ ಶ್ರೀಗಳಲ್ಲಿ ಸಂಸ್ಕೃತ ವೇದಾಂತ ಅಧ್ಯಯನ ಮಾಡಿದ್ದಾರೆ.
ವೃತ್ತಿಯಲ್ಲಿ ಕೃಷಿಕರು, ಪ್ರವೃತ್ತಿಯಲ್ಲಿ ಸಾಹಿತ್ಯ, ತತ್ವಶಾಸ್ತ್ರಗಳ ಅಧ್ಯಯನಗಳ ಜೊತೆಗೆ ಭಾಷಣಗಳು, ಪ್ರವಚನಗಳು, ಕೃತಿ ರಚನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ವಿಚಾರಗಳ ಬಗೆಗಿನ ಚಿಂತನೆಯ ಬರಹ ರೂಪಗಳನ್ನು ಹೊರ ತಂದಿದ್ದಾರೆ. ಪರಿಸರ ಜಾಗೃತಿ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಮಂಗಳೂರಿನಲ್ಲಿ ೫ ತಿಂಗಳು ಸೆರೆವಾಸ ಅನುಭವಿಸಿದ್ದರು. ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಜೊತೆ ನಿಕಟ ಸಂಪರ್ಕ ಹೊಂದಿದ್ದು,೧೯೯೫-೯೬ರಲ್ಲಿ ಕುಮಾರಧಾರಾ ಉಳಿಸಿ ಹೋರಾಟ (ಭರೂಕ ಕಂಪೆನಿಯು ಅಣೆಕಟ್ಟು ಕಟ್ಟುವುದನ್ನು ವಿರೋಧಿಸಿ) ಭಾಗಿಯಾಗಿದ್ದರು. ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಸೇರಿದಂತೆ ಹಲವು ಪರಿಸರ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ೧೦ ವರ್ಷಗಳ ಕಾಲ ಭಾರತೀಯ ಕಿಸಾನ್ ಸಂಘದ ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1980ರ ದಶಕದಲ್ಲಿ ತಾಳಮದ್ದಳೆ ಕ್ಷೇತ್ರದ ಉನ್ನತ ಸ್ತಂಭಗಳಾದ ದೇರಾಜೆ ಮತ್ತು ಶೇಣಿಯವರ ಆಪ್ತ ಒಡನಾಟ ಹೊಂದಿದ್ದರು.
ರಚಿಸಿರುವ ಕೃತಿಗಳು:ಮಹಾಯುದ್ಧಕ್ಕೆ ಮುನ್ನ (ಭಗವದ್ಗೀತೆಯ ಕುರಿತು ಟಿಪ್ಪಣಿ), ಸಂಪಿಗೆ ಭಾಗವತ, ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ(ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕೃತಿ) ಆನಂದ ಲಹರಿ, ಭವ ತಲ್ಲಣ, ಭಕ್ತಿಯ ನೆಪದಲ್ಲಿ, ಮಹಾಭಾರತ ಅನುಸಂಧಾನದ ಭಾರತ ಯಾತ್ರೆ(ರಾ.ಸಾ.ಅ. ದತ್ತಿನಿಧಿ ಪ್ರಶಸ್ತಿ ಪಡೆದ ಲೇಖನ), ಮಾತಿಗೆ ಮುನ್ನ(ಅಡಿಗರ ಕಾವ್ಯ ಕುರಿತು ಲೇಖನಗಳು) ಕೃತಿಯನ್ನು ರಚಿಸಿದ್ದಾರೆ. ಅವರು ಸಂಸ್ಕೃತ, ವೇದಗಳು, ಉಪನಿಷತ್‌ಗಳು, ರಾಮಾಯಣ ಮತ್ತು ಇತರ ಧಾರ್ಮಿಕ ಗ್ರಂಥಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದಾರೆ. ಅವರ ‘ಮಹಾಯುದ್ಧಕ್ಕೆ ಮುನ್ನ’ ಪುಸ್ತಕವನ್ನು ಬಹಳ ವಿಶೇಷ ಪುಸ್ತಕವೆಂದು ಸಾಹಿತ್ಯ ವಲಯದಲ್ಲಿ ಪರಿಗಣಿಸಲ್ಪಟ್ಟಿದೆ.ಪ್ರವಚನ ಮತ್ತು ಉಪನ್ಯಾಸಗಳು:
ಮಂಕುತಿಮ್ಮನ ಕಗ್ಗ-ಇತ್ಯಾದಿ ಅನೇಕ ವಿಷಯಗಳ ಕುರಿತು ಸರಣಿ ಪ್ರವಚನ ನಡೆಸುತ್ತಾ ಬಂದಿದ್ದಾರೆ. ಮಂಗಳೂರು -ಮೈಸೂರು ವಿಶ್ವವಿದ್ಯಾಲಯದ ವಿವಿಧ ಪೀಠಗಳ ಆಶ್ರಯದಲ್ಲಿ ನಡೆದ ಸಭೆಗಳಲ್ಲಿ, ಗೋಷ್ಠಿಗಳಲ್ಲಿ ನಾಡಿನ ಅನೇಕ ಕಾಲೇಜು ವಿದ್ಯಾಸಂಸ್ಥೆಗಳಲ್ಲಿ, ಸಾಗರದ ನೀನಾಸಂ, ಮೈಸೂರಿನ ರಂಗಾಯಣ, ಬೆಂಗಳೂರಿನ ಗೋಖಲೆ ಸಂಸ್ಥೆ, ಇಸ್ಕಾನ್, ರಾಯಚೂರಿನ ‘ಸುದ್ದಿಮೂಲ’ ಪತ್ರಿಕೆಯವರು ಪ್ರತಿವರ್ಷ ನಡೆಸುವ ವಚನಾನುಭಾವ ಗೋಷ್ಠಿಗಳು- ಇತ್ಯಾದಿ ವಿಚಾರ ಸಂಕಿರಣಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದಾರೆ.ವಿದೇಶದಲ್ಲಿಯೂ ಕನ್ನಡದ ಕಂಪು:
೨೦೧೭ರಲ್ಲಿ ಅಮೆರಿಕದ ಕನ್ನಡ ಸಾಹಿತ್ಯ ರಂಗ (ಕೆಎಸ್‌ಆರ್) ಏರ್ಪಡಿಸಿದ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಪಾಲ್ಗೊಂಡು ಬೋಸ್ಟನ್, ನ್ಯೂ ಜೆರ್ಸಿ, ಚಿಕಾಗೊ, ಲಾಸ್ ಏಂಜಲೀಸ್ ಮುಂತಾದ ಅನೇಕ ನಗರಗಳಲ್ಲಿ ಕನ್ನಡಿಗರ ಸಂಘ-ಸಂಸ್ಥೆಗಳಲ್ಲಿ, ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕನ್ನಡ ಪೀಠದಲ್ಲಿ - ಉಪನ್ಯಾಸ ನೀಡಿದ್ದಾರೆ.ಪ್ರಶಸ್ತಿಗಳು:
ಪೊಳಲಿ ಶಾಸ್ತ್ರೀ ಪ್ರಶಸ್ತಿ - ೨೦೦೯, ಕಡವ ಶಂಭು ಶರ್ಮ ಪ್ರಶಸ್ತಿ -೨೦೧೩, ಕಾಂತಾವರ ಸಾಹಿತ್ಯ ಪುರಸ್ಕಾರ- ೨೦೧೩, ರಾಮ ವಿಠಲ ಪ್ರಶಸ್ತಿ- (ಪೇಜಾವರ ಅಧೋಕ್ಷಜ ಮಠ )-೨೦೧೩. ರಮಾ ಗೋವಿಂದ ಪುರಸ್ಕಾರ, ಮೈಸೂರು -೨೦೧೬, ಅರಣ್ಯ ಮಿತ್ರ ಪ್ರಶಸ್ತಿ, ಅರಣ್ಯ ಇಲಾಖೆ, ಮಂಗಳೂರು. - ೨೦೧೬, ಭಾರತ ಪುರಸ್ಕಾರ- ಪರ್ಯಾಯ ಪಲಿಮಾರು ಮಠ -೨೦೨೦ ಸೇರಿದಂತೆ ಅನೇಕ ಕಡೆ ಪ್ರಶಸ್ತಿ ಸನ್ಮಾನಗಳು ಇವರ ಸಾಹಿತ್ಯ ದುಡಿಮೆಗೆ ಸಂದ ಪ್ರತಿಫಲಗಳಾಗಿವೆ.