ಸಾಹಿತಿ ಕವಿತಾಕೃಷ್ಣ ನಿಧನ

KannadaprabhaNewsNetwork |  
Published : Feb 12, 2024, 01:32 AM IST
ಸಾಹಿತಿ ಕವಿತಾಕೃಷ್ಣ ಇನ್ನಿಲ್ಲ | Kannada Prabha

ಸಾರಾಂಶ

ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ(೭೯) ಅವರು ಭಾನುವಾರ ಸಂಜೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ(೭೯) ಅವರು ಭಾನುವಾರ ಸಂಜೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಪತ್ನಿ ಸೇರಿ ಮಕ್ಕಳು ಮೊಮ್ಮಕ್ಕಳು, ಅಪಾರ ಬಂಧು ಬಳಗ, ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ಗಾರ್ಡನ್ ರಸ್ತೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಈ ಮಧ್ಯೆ ಮಧ್ಯಾಹ್ನ 12.30 ರಿಂದ 1ರವರೆಗೆ ತುಮಕೂರಿನ ಕನ್ನಡ ಭವನದ ಬಳಿ ಕವಿತಾಕೃಷ್ಣ ಪಾರ್ಥೀವ ಶರೀರವನ್ನು ಅಂತಿಮದರ್ಶನಕ್ಕೆ ಇರಿಸಲಿದ್ದು, ಜಿಲ್ಲಾ ಕಸಾಪ ವತಿಯಿಂದ ಗೌರವ ನಮನ ಸಲ್ಲಿಸಲಾಗುವುದು ಎಂದು ಪರಿಷತ್ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದ್ದಾರೆ.

1945ನೇ ಸೆ.9ರಂದು ಕೆಂಚಯ್ಯ ಸಂಜೀವಮ್ಮ ದಂಪತಿ ಸುಪುತ್ರರಾಗಿ ಜನಿಸಿದ ಕೆ.ಕೆ. ರಾಜಣ್ಣ (ಕವಿತಾಕೃಷ್ಣ) ಅವರು ಕ್ಯಾತ್ಸಂದ್ರ ಕಲಾಕುಟಂಬದ ಹಿನ್ನೆಲೆಯವರು. ಕನ್ನಡ ರತ್ನ, ಕನ್ನಡ ಪಂಡಿತ್ ಪದವೀಧರರಾಗಿ ಶಿಕ್ಷಕರಾಗಿ ಸರ್ವೋತ್ತಮ ಆಚಾರ್ಯ ಪುರಸ್ಕಾರಕ್ಕೆ ಭಾಜನರಾಗಿದ್ದರು. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯರಚನೆಯಲ್ಲಿ ತೊಡಗಿಸಿಕೊಂಡಿದ್ದು 190 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಕವಿತಾ ಪ್ರಕಾಶನ, ಕವಿತಾಕೃಷ್ಣ ಸಾಹಿತ್ಯ ಮಂದಿರವನ್ನು ಸ್ಥಾಪಿಸಿದ್ದರು.

ಸಿದ್ಧಗಂಗೆಯ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೃಪಾಶೀರ್ವಾದ ಗಳಿಸಿದ್ದ ಕವಿತಾಕೃಷ್ಣ ಅವರು ನೂರಾರು ಸಾಧಕರನ್ನು ಕೃತಿ ರೂಪದಲ್ಲಿ ಪರಿಚಯಿಸಿದ್ದರು. ನಾಡು ನುಡಿಯ ಹಿರಿಮೆಯ ಬಗ್ಗೆ ಕಾವ್ಯಾತ್ಮಕ ಶೈಲಿಯ ಭಾಷಣದ ಮೂಲಕ ಜನಮನ ಸೂರೆಗೊಂಡಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದ ಗೌರವಕ್ಕೂ ಭಾಜನರಾಗಿದ್ದರು.

ಕವಿತಾಕೃಷ್ಣರ ನಿಧನಕ್ಕೆ ಸಿದ್ಧಗಂಗೆಯ ಸಿದ್ಧಲಿಂಗಸ್ವಾಮೀಜಿ, ಹಿರೇಮಠ ಶ್ರೀಗಳು, ಸ್ವಾಮಿಜಪಾನಂದಜೀ, ಡಾ. ವಿರೇಶಾನಂದ ಸರಸ್ವತಿ, ಸಚಿವರಾದ ಡಾ.ಜಿ. ಪರಮೇಶ್ವರ, ಕೆ.ಎನ್. ರಾಜಣ್ಣ, ಸಂಸದ ಜಿ.ಎಸ್. ಬಸವರಾಜ್, ಎಸ್. ನಾಗಣ್ಣ, ಶಾಸಕ ಜ್ಯೋತಿಗಣೇಶ್, ಕೆ.ಎಸ್. ಸಿದ್ಧಲಿಂಗಪ್ಪ ಮಲ್ಲಿಕಾ ಬಸವರಾಜ್ ಬಾ.ಹ. ರಮಾಕುಮಾರಿ, ಧನಿಯಾಕುಮಾರ್‌ ಸೇರಿದಂತೆ ಪದಾಧಿಕಾರಿಗಳು ಹಲವರು ಸಂತಾಪ ಸೂಚಿಸಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ