ಚನ್ನಪಟ್ಟಣ: ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ ಎಂದರೆ ಅದಕ್ಕೆ ಜಾನಪದವೇ ಸಾಕ್ಷಿ. ಪಾಶ್ಚಿಮಾತ್ಯ ಸಂಗೀತಕ್ಕೆ ಮೊರೆ ಹೋಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮೂಲವಾದ್ಯ ಪರಿಕರಗಳೊಂದಿಗೆ ಜಾನಪದದ ಹಾಡುಗಳನ್ನು ಹಾಡುವುದು ಮತ್ತು ಕೇಳುವುದು ಮನಸ್ಸಿಗೆ ಉಲ್ಲಾಸ ತರುತ್ತದೆ ಎಂದು ಸಂಪಾದಕ ಸು.ತ.ರಾಮೇಗೌಡ ಹೇಳಿದರು.
ಭಾರತದಲ್ಲಿ ನಮ್ಮ ಕರ್ನಾಟಕ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡುತ್ತಿವೆ ಎಂದರು.
ಇಂದಿನ ಪಾಶ್ಚಿಮಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳ ವಿವಿಧ ಪ್ರಕಾರಗಳ ಗಾಯನಗಳನ್ನು ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವುದು ಹಾಗೂ ಕಲಾವಿದರಿಗೆ ವೇದಿಕೆ ಕಲ್ಪಿಸಿ ಅವಕಾಶ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮುಂದಿನ ಪೀಳಿಗೆಗೆ ಜಾನಪದದ ಸೊಗಡನ್ನು ಉಳಿಸಲು ಎಲ್ಲಾ ಕಲಾಪ್ರಕಾರದ ಕಲಾವಿದರಿಗೆ ಗರಿಷ್ಠ ಪ್ರಮಾಣದ ಸರ್ಕಾರ ಅನುದಾನ ನೀಡಬೇಕು ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮೂಲ ಜಾನಪದ ಯಾರು ಯಾವಾಗ ಬರೆದರು ಗೊತ್ತಿಲ್ಲ. ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಬಾಯಿಗೆ ಹರಿದು ಬಂದ ನುಡಿಗಳೇ ಜಾನಪದ. ಕಲಾವಿದರಿಗೆ ಇಲಾಖೆಯಿಂದ ಸಿಗುವ ಅವಕಾಶವನ್ನು ಎಲ್ಲಾ ಕಲಾ ಪ್ರಕಾರದ ಕಲಾವಿದರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಜವರೇಗೌಡ, ನಾಗವಾರದ ಎಸ್‌ಡಿಎಂಸಿ ರಾಜ್ಯ ಉಪಾಧ್ಯಕ್ಷ ಶಂಭುಗೌಡ, ಕುಂತೂರು ದೊಡ್ಡಿ ಕಲಾವಿದರಾದ ಪುಟ್ಟರಾಜು, ಗೌರಮ್ಮ ಪಾಲ್ಗೊಂಡಿದ್ದರು. ಹೊನ್ನಿಗನಹಳ್ಳಿ ಸಿದ್ದರಾಜಯ್ಯ, ಸತೀಶ್ ಕೆ.ಎಚ್, ಕುಮಾರ, ಶಿವಪ್ಪ ಎಂ.ಬಿ., ಮಹದೇವ್, ಅಂದಾನಯ್ಯ, ಸಿದ್ದರಾಜು ಚಕ್ಕೆರೆ, ಸೋಬಾನೇ ಕಲಾವಿದರು ಹಾಗೂ ಅನೇಕರು ಗಾಯನವನ್ನು ನಡೆಸಿಕೊಟ್ಟರು.31ಕೆಆರ್ ಎಂಎನ್ 2.ಜೆಪಿಜಿ
ಚನ್ನಪಟ್ಟಣ ತಾಲೂಕಿನ ಅಬ್ಬೂರು ದೊಡ್ಡಿ ಬೀರೇಶ್ವರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಹಾಡಿರೇ ರಾಗಗಳ ತೂಗಿರೇ ದೀಪಗಳ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಕೆ.ಸತೀಶ್ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು.