ಸಾಹಿತ್ಯ, ಕಥೆಗಳಿಗೆ ಯಾವತ್ತೂ ಸಾವಿಲ್ಲ

KannadaprabhaNewsNetwork |  
Published : Feb 08, 2025, 12:30 AM IST
ಪೋಟೋ: 07ಎಸ್‌ಎಂಜಿಕೆಪಿ04ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಟಿಯಲ್ಲಿ ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಕಥೆಗಳ ಪ್ರೇರಣೆಯು ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲಿಯೂ ಕಲ್ಪನೆ, ಭಾವ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಹೇಳಿದರು.

ಶಿವಮೊಗ್ಗ: ಕಥೆಗಳ ಪ್ರೇರಣೆಯು ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲಿಯೂ ಕಲ್ಪನೆ, ಭಾವ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಹೇಳಿದರು.

ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಏರ್ಪಡಿಸಿದ್ದ "ಕಥೆ ಹೇಳುವೆವು ಕೇಳಿ " ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆಯೂ ಕಥೆಗಳು ಇದ್ದವು, ಈಗಲೂ ಇವೆ, ಮುಂದೇಯೂ ಇರುತ್ತವೆ. ಸಾಹಿತ್ಯ ಮತ್ತು ಕಥೆಗಳಿಗೆ ಯಾವತ್ತೂ ಸಾವಿಲ್ಲ ಎಂದರು.

ಕಥೆಗಳ ಕೇಳುವಿಕೆ ಮಗುವಿಗೆ ಹುಟ್ಟಿದ ಕೆಲವೇ ದಿನಗಳಿಂದ ಆರಂಭವಾಗುತ್ತದೆ. ಕಥೆಗಳ ಪ್ರೇರಣೆಯಿಂದ ಮಗುವಿನಲ್ಲಿ ಆಗುವ ಕಲ್ಪನೆಯ ವಿಕಾಸ, ವ್ಯಕ್ತಿತ್ವದ ವಿಕಾಸದಿಂದ ಮಗುವು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತದೆ. ತಂದೆ-ತಾಯಿಯ ಮಡಿಲಲ್ಲಿ ಮಲಗಿ ರೋಚಕತೆಯಿಂದ, ಭಾವನಾತ್ಮಕತೆಯಿಂದ, ತಾದಾತ್ಮ್ಯತೆಯಿಂದ ಕತೆಗಳನ್ನು ಆಸ್ವಾದಿಸುತ್ತದೆ ಎಂದರು.

ಮೊದಲು ಕಥೆಗಳೆಂದರೆ ಅದು ಕೇಳುವ ಕಥೆಗಳಾಗಿದ್ದವು. ಈಗ ಕೇಳುವುದರ ಜೊತೆಗೆ ನೋಡುವ ಕಥೆಗಳು ಮುಂಚೂಣಿಗೆ ಬಂದು ಕೂತಿವೆ. ಕೇಳುವ ಕಥೆಗಳಲ್ಲಿ ಮಗು ತನ್ನದೇ ಕಲ್ಪನೆಯಿಂದ ಸ್ವೀಕರಿಸಿದರೆ, ನೋಡುವ ಕಥೆಗಳಲ್ಲಿ ಒಂದು ರೀತಿಯ ಈ ಕಲ್ಪನೆಯಿಲ್ಲದ ಸ್ಥಿತಿಯನ್ನು ಗಮನಿಸಬಹುದಾಗಿದೆ ಎಂದು ವಿಶ್ಲೇಷಿಸಿದರು.

ಇಂದಿನ ಮಕ್ಕಳು ಕೇಳುವಿಕೆ, ಓದುವಿಕೆಯಿಂದ ನೋಡುವ ಕಥೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಯಸ್ಕರರು ಬದಲಾದ ಡಿಜಿಟಲ್‌ ಫಾರ್ಮ್ ಮೂಲಕ ಕೇಳುವ ಕತೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕಥೆಗಳ ಪ್ರಸ್ತುತತೆಯ ಮಾಧ್ಯಮಗಳು ಬದಲಾಗುತ್ತಿದೆಯೇ ಹೊರತು ಅದರ ಆಕರ್ಷಣೆ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಮಟ್ಟರು.

ಇಂದಿನ ಸಾಹಿತಿಗಳು, ಕತೆಗಾರರು ತಂತ್ರಜ್ಞಾನದ ಅರಿವನ್ನು ಹೊಂದಬೇಕು. ಹೊಸ ತಂತ್ರಜ್ಞಾನದ ಮೂಲಕ ಓದುಗರು, ಸಾಹಿತ್ಯಾಸಕ್ತರನ್ನು ತಲುಪಬೇಕು ಎಂದರು.

ಗೋಷ್ಠಿಯಲ್ಲಿ ಶೈಲಜಾ, ಡಾ.ನಾಗೇಂದ್ರ ಆಚಾರ್ಯ, ಸಂಧ್ಯಾ ಗಾಜನೂರು, ನೇತ್ರಾವತಿ ಸೊರಬ, ಟಿ.ಜಿ.ಹರೀಶ್‌ ಆಳ್ವಾಸ್, ಈಶ್ವರಪ್ಪ ಮಂಕಳಲೆ, ಅಲಕ ತೀರ್ಥಹಳ್ಳಿ ಮತ್ತಿತರರಿದ್ದರು.ಮಲೆನಾಡಿನ ಸಮಸ್ಯೆ ಬಗೆಹರಿಸಲು

ಸಂಸದರುಗಳಿಗೆ ಬದ್ಧತೆಯಿಲ್ಲ : ಕಲ್ಕುಳಿ ವಿಠ್ಠಲಹೆಗಡೆ

ಶಿವಮೊಗ್ಗ: ಸ್ಥಳೀಯ ಜನರ ಸಹಭಾಗಿತ್ವ ಇಲ್ಲದೆಯೆ ಯಾವುದೇ ಪರಿಸರ ಯೋಜನೆ ಯಶಸ್ವಿಯಾಗುವುದಿಲ್ಲ. ಸ್ಥಳೀಯ ಜನರ ವಿಶ್ವಾಸ ಪಡೆಯುವ ಸೌಜನ್ಯತೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತೋರಬೇಕಿದೆ ಎಂದು ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಅಭಿಪ್ರಾಯಪಟ್ಟರು.ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿ, ಖಾಕಿ ಬಟ್ಟೆ ಹಾಕಿದವರೆನ್ನೆಲ್ಲ ನೋಡಿದರೆ ಹೆದರುವ ಪರಿಸ್ಥಿತಿ ಮಲೆನಾಡಿನ ಜನರಲ್ಲಿದೆ. ಯಾವಾಗ ಯಾರು ತಮ್ಮ ಮನೆಗಳನ್ನು ತೆರೆವುಗೊಳಿಸುತ್ತಾರೆ ಎಂಬ ಭಯದಲ್ಲಿಯೆ ಬದುಕುವ ಪರಿಸ್ಥಿತಿ ಬಂದಿದೆ ಎಂದರು.

ಈ ಒತ್ತುವರಿ ಎಂಬ ಸಮಸ್ಯೆ ಶುರುವಾಗಿದ್ದೆ ಗೋದಾವರ್ಮನ್ ಕೇಸ್‌ನಿಂದ. ಅರಣ್ಯ ಇಲಾಖೆ ಕಾಡಿನ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಒಂದು ಸಾರ್ವಜನಿಕ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ನೀಡಲಾಗದ ಪರಿಸ್ಥಿತಿ ಇದೆ. ಎಲ್ಲವು ಕೇಂದ್ರ ಸರ್ಕಾರದ ಹಸಿರು ಪೀಠದ ಅನುಮತಿ ಪಡೆಯಬೇಕು. ಈ ಬಗ್ಗೆ ವಾದ ಮಾಡಬೇಕಾದ ರಾಜ್ಯದ ಸಂಸದರುಗಳಿಗೆ ತಿಳುವಳಿಕೆ ಮತ್ತು ಬದ್ಧತೆಯಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು.ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಆನೆಯ ಸ್ವಭಾವ ಗೊತ್ತಿಲ್ಲದ ಪ್ರದೇಶದಲ್ಲಿ ಆನೆಗಳು ಸಂಚರಿಸುತ್ತಿರುವುದು ಅಪಾಯಕಾರಿಯಾಗಿದೆ. ಆನೆಯ ಪಥವನ್ನು ಬದಲಾಯಿಸಲು ಯಾರಿಂದಲು ಸಾಧ್ಯವಿಲ್ಲ. ಆನೆಗಳ ನೆಲೆಯು ಹೇಮಾವತಿ ಡ್ಯಾಂನಲ್ಲಿ ಮುಳುಗಿ ಹೋಗಿದ್ದರಿಂದ, ಎಲ್ಲೆಂದರಲ್ಲಿ ಆನೆಗಳ ಓಡಾಟ ಕಾಣುತ್ತಿದೆ. ಆನೆಗಳಿಂದ ಸಾವಿಗೀಡಾದವರಿಗೆ ಪರಿಹಾರ ನೀಡಿ ಹೆಚ್ಚುಗಾರಿಕೆ ತೋರುವ ಜೊತೆಗೆ, ಪ್ರಾಣಿಗಳಿಗೆ ನೈಸರ್ಗಿಕ ನೆಲೆ ನೀಡುವ ಪ್ರಯತ್ನ ನಡೆಯಬೇಕಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ, ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜೆ.ಕೆ.ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ