ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕಸಾಪ ಭವನದಲ್ಲಿ ನಡೆದ ಸಾಹಿತಿ, ಉಪನ್ಯಾಸಕ ಸಿ.ಎಸ್.ಮಂಜುನಾಥ್ ಚಿನಕುರಳಿ ಅವರ ಮೇಲುಕೋಟೆ (ಪಾಂಡವಪುರ ತಾಲೂಕು ದರ್ಶನ) ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೃತಿ ರಚನೆ ಮಾಡುವುದು ಸುಲಭವಲ್ಲ. ಪ್ರತಿಭೆಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಅಭಿವ್ಯಕ್ತಪಡಿಸಿಕೊಳ್ಳಲು ಲೋಕಜ್ಞಾನ ಇರಬೇಕು. ಇದರಿಂದ ಒಬ್ಬ ಸಾಹಿತಿ ಒಳ್ಳೆಯ ಕೃತಿ ರಚನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜನರಿದ್ದಾರೆ. ಪಾಂಡವಪುರ ತಾಲೂಕಿನಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತವಾಗಿದೆ. ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಪಾಂಡವಪುರ ದರ್ಶನದ ಕೃತಿ ಮೂಲಕ ತಾಲೂಕಿನ ಎಲ್ಲಾ ರಂಗವನ್ನು ವಿಸ್ತಾರವಾಗಿ ಪರಿಚಹಿಸುವ ಕೆಲಸ ಮಾಡಿದ್ದಾರೆ. ಇನ್ನಷ್ಟು ವಿಸ್ತಾರವಾಗಿ ಸಂಶೋಧನೆ ಮಾಡಿ ಬರೆದರೆ ಅತ್ಯುತ್ತಮ ಪ್ರಬಂಧ ರಚನೆ ಮಾಡಬಹುದು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರೈತನ ಮಗನಾದ ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾಡಿನ ದಿಗ್ಗಜ ಸಾಹಿತಿಗಳು ನಡೆದು ಬಂದಿರುವ ಹೆಜ್ಜೆಗಳನ್ನು ತುಳಿದು ಹಿರಿಯ ಸಾಹಿತಿಗಳ ಸಲಹೆ, ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯಬೇಕು ಎಂದರು.
ಪ್ರೊ.ಡಾ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಮೇಲುಕೋಟೆ ಪಾಂಡವಪುರ ದರ್ಶನ ಎಂಬ ಕೃತಿ ಮೂಲಕ ತಾಲೂಕಿನ ಚಿತ್ರಣವನ್ನು ಪುಸ್ತಕದ ಮೂಲಕ ಹೊರತರುವ ಕೆಲಸ ಮಾಡಿದ್ದಾರೆ. ಮೇಲುಕೋಟೆ ಎಂಬ ಐತಿಹಾಸಿಕ ಸ್ಥಳವನ್ನು ನಾಡಿನ ಕಣ್ಣಿಗೆ ಹೆಚ್ಚು ಪ್ರಚಲಿಸುವಂತೆ ಅಭಿವೃದ್ದಿ ಮಾಡಿದ ಕೀರ್ತಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಸಲ್ಲುತ್ತದೆ ಎಂದರು.
ಇದೇ ವೇಳೆ ಹಿರಿಯ ಸಾಹಿತಿಗಳಾದ ನಿವೃತ್ತ ಪ್ರಾಂಶುಪಾಲರಾದ ಎಸ್.ನಾಗರಾಜು, ಬಿ.ನಾರಾಯಣಗೌಡ, ಸಂತ ಜೋಸೆಫರ್ ಕೇಂದ್ರೀಯ ಶಾಲೆ ಶಿಕ್ಷಕ ಅಮುದ ಅವರನ್ನು ಅಭಿನಂಧಿಸಿದರು. ಕೃತಿ ರಚನೆಗಾರ ಸಿ.ಎಸ್.ಮಂಜುನಾಥ್ ಚಿನಕುರಳಿ ದಂಪತಿಗಳನ್ನು ಸನ್ಮಾನಿಸಿದರು. ಮನ್ಮುಲ್ ಚುನಾವಣೆಯಲ್ಲಿ ನಿರ್ದೇಶಕನಾಗಿ ನೂತನವಾಗಿ ಆಯ್ಕೆಯಾದ ಸಿ.ಶಿವಕುಮಾರ್ ಅವರನ್ನು ಸನ್ಮಾನಿಸಿದರು.