ಕನ್ನಡಪ್ರಭ ವಾರ್ತೆ ಮೈಸೂರುಗ್ರಂಥಾಲಯಗಳು ಜ್ಞಾನದ ಅಣೆಕಟ್ಟೆಗಳು. ಅಲ್ಲಿ ಯಾವಾಗಲೂ ಸಮೃದ್ಧವಾದ ನೀರಿರಬೇಕು. ಎಂದೂ ಬತ್ತಬಾರದು. ಈ ಕಾರಣಕ್ಕಾಗಿ ಸರ್ಕಾರ ಪುಸ್ತಕ ಖರೀದಿಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು ಎಂದು ಸಾಹಿತಿ ಡಾ. ಅರವಿಂದ ಮಾಲಗತ್ತಿ ಹೇಳಿದರು.ನಗರದ ದಿ ಎಂಜಿನಿಯರ್ ಗಳ ಸಂಸ್ಥೆಯಲ್ಲಿ ವಿಸ್ಮಯ ಪ್ರಕಾಶನ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾತನೂರು ದೇವರಾಜ್ ಅವರ ಅಭಿವ್ಯಕ್ತಿ ಸಂಪದ, ಡಾ.ಬಿ. ಬಸವರಾಜು ಅವರ ಕಾಡು ಮಲ್ಲಿಗೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇ. ಜವರೇಗೌಡರು ವಿಶ್ವಕೋಶ ಪ್ರಕಟಣೆಗೆ ಮುಖ್ಯಮಂತ್ರಿಗಳ ಧನಸಹಾಯ ಕೇಳಿದಾಗ ಆ ಹಣದಲ್ಲಿ ಅಣೆಕಟ್ಟೆಯನ್ನೇ ಕಟ್ಟಬಹುದು ಎಂದುತ್ತರಿಸಿದರು. ಇದಕ್ಕೆ ಪ್ರತಿಯಾಗಿ ದೇಜಗೌ ಅವರು ಅಣೆಕಟ್ಟೆ ಕಟ್ಟುವಷ್ಟೇ ಜ್ಞಾನದ ಅಣೆಕಟ್ಟೆ ಕಟ್ಟುವುದು ಮುಖ್ಯ ಎಂದು ಮೌಲಿಕವಾದ ಮಾತುಗಳನ್ನು ಆಡಿದ್ದಾರೆ. ರಾಜ್ಯ ಸರ್ಕಾರ ಪ್ರಕಾಶಕರ ಉದ್ಧಾರಕ್ಕಾಗಿ ಪುಸ್ತಕ ಖರೀದಿಸದಿದ್ದರೂ, ಜ್ಞಾನದ ಕಾರಣವಾಗಿ ಪುಸ್ತಕಗಳನ್ನು ಖರೀದಿಸಬೇಕು ಎಂದರು.ಓದುಗರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದನ್ನು ಒಪ್ಪಲಾಗದು. ಓದುವ ಸ್ವರೂಪ ಬದಲಾಗಿದೆ. ನಾವು ನೋಡುವ ದೃಷ್ಟಿಕೋನ ಬದಲಾಗಿದೆ. ಕೇಳುವುದು ಇಂದಿನ ಓದುವ ರೂಪಾಗಿದೆ. ಯೂಟ್ಯೂಬ್ ಪುಸ್ತಕದ ಇನ್ನೊಂದು ರೂಪ. ರೀಲ್ಸ್ ಗಳು ಬಹಳ ಪರಿಣಾಮಕಾರಿಯಾಗಿವೆ ಎಂದು ಅವರು ಹೇಳಿದರು.ಡಾ.ಬಿ. ಬಸವರಾಜು ಅವರ ಕಾಡು ಮಲ್ಲಿಗೆ ಕಿರು ಕಾದಂಬರಿ ಅಕ್ಷರವನ್ನು ಅಸ್ತ್ರವನ್ನಾಗಿಸಿಕೊಂಡು ರೂಪುತಾಳಿದೆ. ಬಂಡಾಯ ಪರಿಭಾಷೆಯಿಂದ ಆರಂಭವಾಗುವ ಕಾದಂಬರಿ ಸಿದ್ಧ ಮಾದರಿ ಮುರಿಯುತ್ತದೆ. ಸಿನಿಮಾಗೆ ಹೇಳಿ ಮಾಡಿಸಿದಂತೆ ನಿರೂಪಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಕಾಡು ಮಲ್ಲಿಗೆ ಕಾದಂಬರಿಯಲ್ಲಿ ತಂತ್ರಗಾರಿಕೆ ಇದೆ. ನೇರವಾಗಿ ಏನನ್ನೂ ಹೇಳುವುದಿಲ್ಲ. ನಾಯಕಿ ಋತುಮತಿಯಾದ ಸನ್ನಿವೇಶವನ್ನು ಬಹಳ ವಿಶಿಷ್ಟವಾಗಿ ರೂಪಿಸಲಾಗಿದೆ. ಪುರುಷರು ಬರೆಯುವ ಕಾದಂಬರಿಯಲ್ಲಿ ಋತುಮತಿ ವಿಷಯವಾದದ್ದು ಮಹತ್ವದದ್ದು ಎಂದರು. ಸಾತನೂರು ದೇವರಾಜ ಪಳಗಿದ ಬರಹಗಾರರು. ಅವರ ಕೃತಿಯಲ್ಲಿ ವಸ್ತು ನಿಷ್ಠತೆ ಇದೆ. ನಿರ್ದಿಷ್ಟ ಸಿದ್ಧಾಂತಕ್ಕೆ ಕಟ್ಟಿ ಹಾಕಿಕೊಂಡಿಲ್ಲ. ವಿಜ್ಞಾನಕ್ಕೂ ಭಾವನಾತ್ಮಕ್ಕೂ ಸಂಬಂಧ ಇಲ್ಲ. ಆದರೆ, ದೇವರಾಜ ಅವರ ಬರಹದಲ್ಲಿ ಭಾವನಾತ್ಮಕತೆ ಇದೆ. ಮೌಲಿಕ ಕೃತಿಗಳಿರುವ ನೈತಿಕ ಕೃತಿ ಎಂದು ಅವರು ಶುಭ ಕೋರಿದರು.ಪ್ರಕಾಶಕ ಪ್ರಕಾಶ್ ಚಿಕ್ಕಪಾಳ್ಯ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಸಿದರು.ಸಾಹಿತಿ ಪ್ರೊ.ಸಿ. ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಅಭಿವ್ಯಕ್ತಿ ಸಂಪದ ಕುರಿತು ಕನ್ನಡ ಪ್ರಾಧ್ಯಾಪಕಿ ಡಾ.ಬಿ.ಪಿ. ಆಶಾಕುಮಾರಿ, ಕಾಡು ಮಲ್ಲಿಗೆ ಕುರಿತು ಲೇಖಕ ಟಿ. ಸತೀಶ್ ಜವರೇಗೌಡ ಮಾತನಾಡಿದರು. ಪ್ರಕಾಶಕ ಪ್ರಕಾಶ್ ಚಿಕ್ಕಪಾಳ್ಯ ಇದ್ದರು. ಹಿರಿಯ ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಸ್ವಾಗತಿಸಿದರು. ಗಾಯಕ ದೇವನಾಂದ ವರಪ್ರಸಾದ್ ಪ್ರಾರ್ಥಿಸಿದರು.