ಸಾಹಿತಿ ಡಾ.ಜಿ.ಬಿ.ಹರೀಶ್ ಅಭಿಮತ । ನಾಲ್ಕನೇ ರಾಜ್ಯ ಅಧಿವೇಶನದ ಸಮಾರೋಪ । ವಿಜಯಪುರದಲ್ಲಿ 5ನೇ ಸಮಾವೇಶ
ಸ್ವಂತಿಕೆಯ ಆಧಾರದಲ್ಲಿ ಕನ್ನಡ ಸಾಹಿತ್ಯ ಬೆಳೆದಿದೆ. ತತ್ವಶಾಸ್ತ್ರಕ್ಕೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎಂಬುದು ಸರಿಯಲ್ಲ. ನಮ್ಮ ದೇಶದಲ್ಲಿ ಸಾಹಿತ್ಯ ಹಾಗೂ ದಾರ್ಶನಿಕರ ಚಿಂತನೆ ಒಟ್ಟೊಟ್ಟಿಗೆ ಸಾಗಿದೆ. ಜನರ ನಂಬಿಕೆ, ಆಚಾರ-ವಿಚಾರಗಳನ್ನು ಬಳಸಿಕೊಂಡು ಸಾಹಿತ್ಯ ರಚನೆಯಾಗಿದೆ ಎಂದು ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಿ.ಬಿ.ಹರೀಶ್ ತಿಳಿಸಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಾಹಿತ್ಯದಲ್ಲಿ ಸ್ವತ್ವ ಶೀರ್ಷಿಕೆಯ ನಾಲ್ಕನೇ ರಾಜ್ಯ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಸಾಹಿತ್ಯದಲ್ಲಿ ಸ್ವಂತಿಕೆ ಇದ್ದರೂ ಅದನ್ನು ನೋಡುವ ದೃಷ್ಟಿಕೋನವನ್ನು ಕಾಲೇಜು, ವಿಶ್ವವಿದ್ಯಾಲಯಗಳು ಬೆಳೆಸುತ್ತಿಲ್ಲ. ಮಾರ್ಕ್ಸ್ ವಾದ, ಸಮಾಜವಾದ, ಅಂಬೇಡ್ಕರ್ ವಾದ ಕಲಿಸುತ್ತಿರುವವರು ಸಾಹಿತ್ಯವಾದವನ್ನು ಹೇಳಿಕೊಡುತ್ತಿಲ್ಲ. ಅದರ ಬದಲು ಇರುವ, ಇಲ್ಲದಿರುವ ಸಂಘರ್ಷಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.
ಶೈವ ಚಿಂತನೆ ಅರ್ಥವಾಗದೆ ಅಲ್ಲಮಪ್ರಭು ಅರ್ಥವಾಗುವುದಿಲ್ಲ. ಸಾಹಿತ್ಯದಲ್ಲೂ ಇಂತಹದ್ದೇ ಸ್ವಂತಿಕೆಯ ಪ್ರಮಾಣ ಬೇಕಾಗುತ್ತದೆ. ಆರ್ಥಿಕ, ರಾಜಕೀಯ ಸಂಘರ್ಷಗಳು ನಮಗೆ ಪ್ರಮಾಣವಲ್ಲ. ಸ್ವತ್ವದ ವ್ಯಾಖ್ಯಾನ ಮಾಡುವಾಗ ಮೋಹಕ ಸಾಹಿತಿಗಳನ್ನು ಹೊರಗಿಡಬೇಕು. ಸಾಹಿತಿಗಳ ಇಬ್ಬಂದಿ ನೀತಿಯು ಸ್ವಂತಿಕೆಗೆ ಮಾಮಾರಕವಾಗಿದೆ. ವ್ಯಕ್ತಿಗಳ ಮೇಲಿನ ಮೋಹ ಬಿಡಬೇಕು. ಕೃತಿಗಳ ಆಧಾರದಲ್ಲಿ ಸಾಹಿತಿಗಳನ್ನು ಅಳೆಯಬೇಕು ಎಂದು ಪ್ರತಿಪಾದಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವರ್ಷದಿಂದ ವರ್ಷಕ್ಕೆ ಬಹುದೊಡ್ಡ ಪ್ರಗತಿ ಕಾಣುತ್ತಿದೆ. ಕಳೆದ 15 ವರ್ಷದಲ್ಲಿ ರಾಜ್ಯಮಟ್ಟದ ಸಂಘಟನೆಯಾಗಿ ಬೆಳೆದಿದೆ. ಪರಿಷತ್ತಿನ ಸದಸ್ಯರಾಗಲು ಹೆಚ್ಚು ಜನ ಮುಂದೆ ಬರುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಸದಸ್ಯರನ್ನು ಮಾಡಬೇಕೆಂಬ ಗುರಿ ಇದ್ದು, ಪ್ರಯತ್ನಪಟ್ಟರೆ 35,000 ಸದಸ್ಯರ ಸಂಖ್ಯೆ ಮುಟ್ಟುವುದು ಕಷ್ಟವಲ್ಲ. ಎಲ್ಲರೂ ಸಹಕರಿಸಿದರೆ ದೊಡ್ಡ ಸಂಘಟನೆ ಕಟ್ಟಲು ಸಾಧ್ಯ ಎಂದರು.
ಇದೇ ವೇಳೆ ವಿಜಯಪುರದಲ್ಲಿ ಮುಂಬರುವ ಐದನೇ ರಾಜ್ಯ ಅಧಿವೇಶನವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಜಯಪುರದ ಅನಿಲ್ ಬೀಳುಂಡಗಿ, ಶಿವಶರಣಪ್ಪ ಅಧಿವೇಶನದ ಅಧ್ಯಕ್ಷರಿಂದ ವೀಳ್ಯ ಸ್ವೀಕರಿಸಿದರು.