ಯುವಕರು ತಮ್ಮ ಸಾಮರ್ಥ್ಯವನ್ನು ಅರಿಯಲು ಈ ಸಮಾವೇಶದ ಗೋಷ್ಠಿಯ ವಿಷಯಗಳು ಅನುಕೂಲವಾಗಿವೆ. ವ್ಯಕ್ತಿ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜತೆಗೆ ಸಮಾಜದ ಹಿತವನ್ನು ಬಯಸುವಂತಾದರೆ ದೇಶ ಸಮೃದ್ಧವಾಗುತ್ತದೆ.
ಗದಗ: ಯುವಕರು ದೈಹಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಸದೃಢತೆಯನ್ನು ಹೊಂದುವಂತೆ ನಿತ್ಯದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು ಎಂದು ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ವಾಮಿ ಶಿವಪ್ರಿಯಾನಂದಜಿ ಮಹಾರಾಜ ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆದರ್ಶ ಶಿಕ್ಷಣ ಸಮಿತಿ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಜರುಗಿದ ಯುವ ಸಾಹಿತ್ಯ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಓದು, ವ್ಯಾಯಾಮ, ಚಿಂತನೆ, ಚರ್ಚೆಗಳ ಮೂಲಕ ಯುವಕರು ವ್ಯಕ್ತಿತ್ವ ರೂಪಿಸಿಕೊಂಡು ದೇಶವನ್ನು ಮುನ್ನಡೆಸಬೇಕು. ಸಾಹಿತ್ಯ ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಕೈಹಿಡಿದು ನಡೆಸಲು ಪ್ರಬಲ ಮಾಧ್ಯಮವಾಗಿದೆ ಎಂದರು.
ಯುವಕರು ತಮ್ಮ ಸಾಮರ್ಥ್ಯವನ್ನು ಅರಿಯಲು ಈ ಸಮಾವೇಶದ ಗೋಷ್ಠಿಯ ವಿಷಯಗಳು ಅನುಕೂಲವಾಗಿವೆ. ವ್ಯಕ್ತಿ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜತೆಗೆ ಸಮಾಜದ ಹಿತವನ್ನು ಬಯಸುವಂತಾದರೆ ದೇಶ ಸಮೃದ್ಧವಾಗುತ್ತದೆ. ಸಣ್ಣತನ, ಸೋಮಾರಿತನದಿಂದ ಹೊರಬರಬೇಕು ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಯುವಕರು ಶಕ್ತಿ, ಸಾಮರ್ಥ್ಯಗಳನ್ನು ಅನುಪಯೋಗ ಕಾರ್ಯಗಳಲ್ಲಿ ವಿನಿಯೋಗಿಸುತ್ತಿದ್ದಾರೆ. ಯುವಕರು ದೇಶದ ಆಶಾಕಿರಣ. ಅತಿಯಾದ ಅಂತರ್ಜಾಲ ಬಳಕೆ, ಕೃಷಿಯ ಕುರಿತಾದ ಅನಾಸಕ್ತಿ, ಓದುವ ಸಂಸ್ಕೃತಿಯಿಂದ ವಿಮುಖತೆ ಯುವಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಯುವಕರ ಕ್ರಿಯಾಹೀನತೆ ದೇಶದ ಉನ್ನತಿಯ ದೃಷ್ಟಿಯಿಂದ ಹಿನ್ನಡೆಯಾಗಿದೆ. ಈ ಕುರಿತು ಚಿಂತನ ಮಂಥನ ನಡೆಸುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನಿಸ್ ಮಾತನಾಡಿ, ಪಠ್ಯದ ಜತೆಗೆ ಪ್ರಚಲಿತ ವಿದ್ಯಮಾನಗಳ ಕುರಿತು ಗಂಭೀರವಾಗಿ ಯುವಕರನ್ನು ಚಿಂತಿಸುವಂತೆ ಮತ್ತು ಕಾರ್ಯೋನ್ಮುಖರಾಗುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಯುವ ಜನಾಂಗವನ್ನು ಜಾಗೃತಗೊಳಿಸುವ ದಿಸೆಯಲ್ಲಿ ಈ ಸಮಾವೇಶ ಈ ಸಂದರ್ಭಕ್ಕೆ ಸಾಕ್ಷಿಯಾಗಿದೆ ಎಂದರು.ಈ ವೇಳೆ ಪ್ರಾ. ಡಾ. ವಿ.ಟಿ. ನಾಯ್ಕರ, ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣವರ, ಹನುಮಂತಗೌಡ ಕಲ್ಮನಿ, ಅಂದಾನೆಪ್ಪ ವಿಭೂತಿ, ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಎ.ಎಸ್. ಮಕಾನದಾರ, ಅನ್ನದಾನಿ ಹಿರೇಮಠ, ಅಂದಾನಯ್ಯ ಅರವಟಗಿಮಠ, ಶ್ವೇತಾ ಕೊಟಗಿ, ಎಸ್.ಎಂ. ಕಾತರಕಿ, ಸತೀಶ ಚನ್ನಪ್ಪಗೌಡರ, ಡಿ.ಎಸ್. ಬಾಪುರಿ, ಅಮರೇಶ ರಾಂಪೂರ, ಆರ್.ಎಲ್. ಕುಲಕರ್ಣಿ, ಲಿಂಗರಾಜ ರೇಷ್ಮೆ, ಎಸ್.ಬಿ. ಜಾಧವ, ಎಸ್.ಯು. ಸಜ್ಜನಶೆಟ್ಟರ ಇದ್ದರು. ಬಾಹುಬಲಿ ಜೈನರ್ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.