ಭಾವನೆಗಳ ಅಭಿವ್ಯಕ್ತಿಯೇ ಸಾಹಿತ್ಯ: ನಂದನೂರ

KannadaprabhaNewsNetwork | Updated : Oct 28 2024, 01:04 AM IST

ಸಾರಾಂಶ

ಆರೋಗ್ಯಕರ ಸಮಾಜಕ್ಕೆ ಕವನಗಳು ಸ್ಫೂರ್ತಿಯಾಗಿದ್ದು, ವಾಸ್ತವಿಕತೆ, ಐತಿಹಾಸಿಕತೆ, ಪ್ರಾದೇಶಿಕತೆ ಒಳಗೊಂಡಿರುವ ಸೌಗಂಧ ಕವನ ಸಂಕಲನ ಕನ್ನಡ ಸಾಹಿತ್ಯ ಕ್ಷೇತ್ರ ಸೇರಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪ್ರತಿಯೊಬ್ಬರಲ್ಲಿಯೂ ಭಾವನೆಗಳಿದ್ದು ಅವುಗಳನ್ನು ಒಂದು ಶಿಸ್ತಿನ ಬರಹಕ್ಕೆ ಅಳವಡಿಸಿಕೊಂಡಾಗ ಆ ಅಭಿವ್ಯಕ್ತಿಯೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ ಎಂದು ಇಲಕಲ್ಲ ಡಯಟ್ ಉಪನಿರ್ದೇಶಕ ಬಿ.ಕೆ.ನಂದನೂರ ಹೇಳಿದರು.

ಶನಿವಾರ ಪಟ್ಟಣದ ಸರಸ್ವತಿ ವಿದ್ಯಾ ಮಂದಿರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ, ಹಾಗೂ ಕರ್ನಾಟಕ ಸಾವಿತ್ರಿಭಾಯಿ ಫುಲೆ ತಾಲೂಕು ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕಿ ಅನ್ನಪೂರ್ಣ ಜವಳಿಯವರ ಚೊಚ್ಚಲ ಕವನ ಸಂಕಲನ ಸೌಗಂಧ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯದ ಪ್ರಕಾರವಾದ ಕಾವ್ಯದಲ್ಲಿ ಸಹೃದಯರ ಮನಸ್ಸು, ಭಾವನೆಗಳನ್ನು ಅರಳಿಸುವ ಶಕ್ತಿ ಮತ್ತು ಚೈತನ್ಯ ಇರುತ್ತದೆ. ಕಾವ್ಯದಲ್ಲಿ ಜೀವನದ ಅನುಭವಗಳ ಜೊತೆಗೆ ರೈತ, ವಿಜ್ಞಾನ, ನಿಸರ್ಗ, ತಾಯಿ, ದೇಶ, ನಾಡು, ಸೈನಿಕ, ಗುರುಭಕ್ತಿ, ಮಾತೃಭಾವನೆಗಳಂತಹ ಸಾಮಾಜಿಕ ಮೌಲ್ಯಗಳನ್ನು ಕಾವ್ಯದ ವಸ್ತುಗಳಾಗಿ ಸೌಗಂಧ ಕವನ ಸಂಕಲನದ ಮೂಲಕ ಸೃಜನಾತ್ಮಕವಾಗಿ ಕವಿಯತ್ರಿ ಅನ್ನಪೂರ್ಣ ಜವಳಿ ಕಟ್ಟಿಕೊಟ್ಟಿದ್ದಾರೆ. ನಮ್ಮ ಶಿಕ್ಷಕರು ಸಾಹಿತ್ಯದ ಆಸಕ್ತಿಯನ್ನು ತಮ್ಮ ಬದುಕಿನಲ್ಲಿ ಬೆಳೆಸಿಕೊಂಡರೆ, ಶಾಲಾ ಮಕ್ಕಳಿಗೆ ಅಲಂಕಾರ, ಛಂದಸ್ಸು, ವ್ಯಾಕರಣದಂತಹ ಮಹತ್ವದ ವಿಷಯಗಳನ್ನು ಅಚ್ಚುಕಟ್ಟಾಗಿ ಕಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಾದಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಹಳಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ಸಮಾಜಕ್ಕೆ ಕವನಗಳು ಸ್ಫೂರ್ತಿಯಾಗಿದ್ದು, ವಾಸ್ತವಿಕತೆ, ಐತಿಹಾಸಿಕತೆ, ಪ್ರಾದೇಶಿಕತೆ ಒಳಗೊಂಡಿರುವ ಸೌಗಂಧ ಕವನ ಸಂಕಲನ ಕನ್ನಡ ಸಾಹಿತ್ಯ ಕ್ಷೇತ್ರ ಸೇರಿದೆ. ಉದಯೋನ್ಮುಖ ಮಹಿಳಾ ಕವಿಯತ್ರಿಯಾಗಿ ಸಾಹಿತ್ಯ ವಲಯದಲ್ಲಿ ಬೆಳೆಯುತ್ತಿರುವ ಅನ್ನಪೂರ್ಣ ಜವಳಿ ಅವರು ಮಹಿಳಾ ಸಾಹಿತ್ಯ ಪರಿಸರ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಅನ್ನಪೂರ್ಣ ಜವಳಿ ಅವರ ಸೌಗಂಧ ಕವನ ಸಂಕಲನದ ಕವನವೊಂದನ್ನು ತ್ರಿಪದಿ ಶೈಲಿಯಲ್ಲಿ ರಾಗ ಬದ್ಧವಾಗಿ ಹಾಡಿ, ಇದರಲ್ಲಿರುವ ಪ್ರತಿಯೊಂದು ಕವಿತೆಗಳು ಭಾವಪೂರ್ಣವಾಗಿವೆ ಎಂದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರೊ.ಚಂದ್ರಶೇಖರ ಹೆಗಡೆ ಪುಸ್ತಕ ಪರಿಚಯ ಮಾಡಿದರು. ಡಾ.ವಿ.ಎ.ಬೆನಕನಾಳ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ, ಕರ್ನಾಟಕ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಜಮುನಾ ಸಿಂಗದ, ಬಿಆರ್ ಪಿ ನಾಲತವಾಡ ವೇದಿಕೆಯಲ್ಲಿ ಇದ್ದರು. ಭಾಗೀರತಿ ಆಲೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share this article