ಕನ್ನಡಪ್ರಭ ವಾರ್ತೆ ಮಾನ್ವಿ
ಪಟ್ಟಣದ ಸಿಂಧನೂರು ರಸ್ತೆ ಎಸ್‌ಬಿಐ ಶಾಖೆ ಪಕ್ಕದಲ್ಲಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಸ್ವಲ್ಪವೇ ಮಳೆ ಬಂದರು ಕೂಡ ರಸ್ತೆಗಳಲ್ಲಿ ನೀರು ನಿಲ್ಲುವ ಮೂಲಕ ಕೆರೆಗಳಂತೆ ಆಗುತ್ತವೆ. ರಸ್ತೆ ಮೇಲೆ ನಿಂತ ನೀರು ಹರಿಯುವ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಗಾಲ ಮುಗಿಯುವವರೆಗೂ ವಾರ್ಡ್‌ನ ಜನರು ನಿಂತ ನೀರಿನಲ್ಲಿ ನಡೆದುಕೊಂಡು ಸಾಗಬೇಕಿದೆ. ಮಳೆ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಇಲ್ಲಿನ ನಿವಾಸಿಗಳ ಮನೆಗಳಲ್ಲಿ ವಿಪರೀತವಾದ ಸೊಳ್ಳೆ ಕಾಟ ಮಳೆಗಾಲ ಮುಗಿಯುವವರೆಗೂ ಇರುತ್ತದೆ. ಕೆಲವರು ತಮ್ಮ ಸ್ವಂತ ಖರ್ಚಿನಿಂದ ಮರಂ ಹಾಕಿ ರಸ್ತೆ ಸರಿಪಡಸಿದರು ಕೂಡ ನೀರು ಹರಿಯುವ ವ್ಯವಸ್ಥೆ ಇಲ್ಲದೆ ಇರುವುದರಿಂದ ಮರಂ ಒಂದೆ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಪುನಃ ಜನರು ನಿಂತ ನೀರಿನಲ್ಲಿ ನಡೆದಾಡಬೇಕಾಗಿದೆ. ರಾತ್ರಿ ವೇಳೆ ರಸ್ತೆ ಕಾಣದೆ ವಾಹನ ಸವಾರರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.
2ನೇ ವಾರ್ಡ್‌ನ ನಿವಾಸಿ ಚನ್ನಬಸವ ಮಾತನಾಡಿ, ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಕೂಡ ನಮ್ಮ ವಾರ್ಡ್‌ಗೆ ಸರಿಯಾದ ಸಿ.ಸಿ.ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ಬಹಳ ತೊಂದರೆಯಾಗುತ್ತದೆ. ಕೂಡಲೇ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಮಾಡಕೋಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.