ಧಾರ್ಮಿಕ ಮತ್ತು ಸಾಂಸ್ಕೃತಿಕ ಬುನಾದಿ ಗಟ್ಟಿಗೊಳಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ.
ಹಾನಗಲ್ಲ: ಮಾನವೀಯ ಮೌಲ್ಯಗಳು ಮರುಸ್ಥಾಪನೆಯಾಗಬೇಕಿದೆ. ಪ್ರತಿಯೊಬ್ಬರೂ ಸಾಮರಸ್ಯ, ಸೌಹಾರ್ದತೆ, ಸಹಬಾಳ್ವೆಯಿಂದ ಬದುಕು ಸಾಗಿಸಲು ಮುಂದಾಗಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಹೇರೂರು ಗ್ರಾಮದಲ್ಲಿ ಬೀರಲಿಂಗೇಶ್ವರ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.
ಇಂದಿನ ಕಲಿಯುಗದಲ್ಲಿ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಪ್ರಚಲಿತದಲ್ಲಿವೆ. ಆಧುನಿಕತೆಯ ಪ್ರಭಾವಕ್ಕೊಳಗಾಗಿ ನಗರ ಪ್ರದೇಶದ ಜನತೆ ವಿಲಾಸಿ ಜೀವನಕ್ಕೆ ಮಾರು ಹೋಗಿದ್ದಾರೆ. ಆದರೆ ಇಂದಿಗೂ ಗ್ರಾಮೀಣರು ಶ್ರದ್ಧೆ, ಭಕ್ತಿಯಿಂದ ಮಠ, ಮಂದಿರಗಳ ಸಾಮಿಪ್ಯದಲ್ಲಿದ್ದು, ನಾಗರಿಕ ಜೀವನ ನಡೆಸುತ್ತಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ್ದ ರಾಣಿಬೆನ್ನೂರಿನ ಶಿವಯೋಗಿ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬುನಾದಿ ಗಟ್ಟಿಗೊಳಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ. ಮಠ, ಮಂದಿರಗಳ ಸಾಮಿಪ್ಯದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎನ್ನುವ ಸತ್ಯದ ಅರಿವನ್ನು ಯುವಕರಿಗೆ ಮಾಡಿಸುವ ಅನಿವಾರ್ಯತೆ ಇದೆ. ಪ್ರಪಂಚದ ಕೆಲವು ದೇಶಗಳು ಸಂಪತ್ತಿನಲ್ಲಿ ಶ್ರೀಮಂತವಾಗಿರಬಹುದು. ಆದರೆ ಅಂಥ ದೇಶಗಳ ಜನರು ಜೀವನದಲ್ಲಿ ಶಾಂತಿ, ನೆಮ್ಮದಿ ಅರಸಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿನ ಸಾಮರಸ್ಯದ ಬದುಕು ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದು, ಸಂಸ್ಕೃತಿ ಶ್ರೀಮಂತವಾಗಿದೆ. ಅದನ್ನು ಉಳಿಸಿ- ಬೆಳೆಸುವ ಮಹತ್ವದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು. ಬಂಕಾಪುರದ ಕೆಂಡದಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಶಿವಯೋಗಿ ಹಿರೇಮಠ, ಪ್ರಕಾಶಗೌಡ ಪಾಟೀಲ, ಗುಡ್ಡನಗೌಡ ಪೊಲೀಸಗೌಡ್ರ, ರಾಮನಗೌಡ ಪಾಟೀಲ, ಪ್ರಕಾಶ ಬಣಕಾರ ಇತರರು ಇದ್ದರು.ಬಾಲ್ಯವಿವಾಹ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ
ಹಾವೇರಿ: ಅಕ್ಷಯ ತೃತೀಯ ದಿನದ ಹಿನ್ನೆಲೆಯಲ್ಲಿ ಏ. 30ರಂದು ನಡೆಯುವ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಗಳಿದ್ದು, ಬಾಲ್ಯವಿವಾಹ ತಡೆಗೆ ಅಧಿಕಾರಿಗಳು ಅಗತ್ಯ ಮುಂಜಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.
ಬಾಲ್ಯವಿವಾಹ ನಿಷೇಧಾಧಿಕಾರಿಗಳು ಬಾಲ್ಯವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಲಯ, ಗ್ರಾಮ, ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಡ್ಡಾಯವಾಗಿ ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಸಾಮೂಹಿಕ ಮತ್ತು ವೈಯಕ್ತಿಕವಾಗಿ ಯಾವುದೇ ಬಾಲ್ಯವಿವಾಹ ನಡೆಯದಂತೆ ನಿಯಮಾನುಸಾರ ಕಾರ್ಯಪ್ರವೃತ್ತರಾಗಿ, ಕೂಡಲೇ ಎಲ್ಲೆಲ್ಲಿ ವಿವಾಹ ಕಾರ್ಯಕ್ರಮಗಳಿವೆಯೋ ಅಂತಹ ಕಡೆ ತೆರಳಿ ವಧು, ವರರ ವಯಸ್ಸಿನ ಮಾಹಿತಿ ಕಲೆ ಹಾಕಬೇಕು ಎಂದು ತಿಳಿಸಿದ್ದಾರೆ.ಸಾರ್ವಜನಿಕರಿಗೆ ಬಾಲ್ಯವಿವಾಹ ನಡೆಯುವ ಮಾಹಿತಿ ಕಂಡುಬಂದಲ್ಲಿ 1098 ಅಥವಾ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವುದರ ಮೂಲಕ ಬಾಲ್ಯವಿವಾಹಗಳನ್ನು ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.