ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಲು ತರಳಬಾಳು ಶ್ರೀ ಕಿವಿಮಾತು

KannadaprabhaNewsNetwork | Published : Feb 28, 2024 2:33 AM

ಸಾರಾಂಶ

ಭೂಮಿಯಲ್ಲಿ ಪಾರ್ಥೇನಿಯಂ ಬೆಳೆಯುವಂತೆ ಮನಸ್ಸಿನಲ್ಲಿ ಕೊಳೆಯೂ ಬೆಳೆಯುತ್ತದೆ. ಅದನ್ನು ದೂರವಿಟ್ಟು ಬದಕನ್ನು ಹಸನು ಮಾಡಿಕೊಳ್ಳಬೇಕು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಜನರು ಪರಸ್ಪರರ ಮಧ್ಯೆ ಪ್ರೀತಿ ಮತ್ತು ವಿಶ್ವಾಸ ಬೆಳೆಸಿಕೊಂಡು ಸೌಹಾರ್ದಯುವ ಬದುಕು ನಡೆಸುವಂತೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಿವಿಮಾತು ಹೇಳಿದರು.

ಸಿರಿಗೆರೆ ಸಮೀಪದ ಸೀಗೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸವೇಶ್ವರ ದೇವಾಲಯ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಭೂಮಿಯಲ್ಲಿ ಪಾರ್ಥೇನಿಯಂ ಬೆಳೆಯುವಂತೆ ಮನಸ್ಸಿನಲ್ಲಿ ಕೊಳೆಯೂ ಬೆಳೆಯುತ್ತದೆ. ಅದನ್ನು ದೂರವಿಟ್ಟು ಬದಕನ್ನು ಹಸನು ಮಾಡಿಕೊಳ್ಳಬೇಕು ಎಂದರು.

ಪುರಾತನ ಕಾಲದ ಬಹಳಷ್ಟು ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಧಾರ್ಮಿಕ ಸಂಪ್ರದಾಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮಹಿಳೆಯರು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಮದುವೆಯಲ್ಲಿ ಮಧೂವರರು ಧರಿಸುತ್ತಿದ್ದ ಬಾಸಿಂಗವನ್ನು ಮುಂದೆ ವರ್ಷ ತುಂಬಿ ಮನೆಗೆ ಮಗುವೊಂದು ಬರುವ ತನಕವೂ ಕಾಪಾಡುತ್ತಿದ್ದರು. ಈಗ ಅಂತಹ ರೋಚಕ ಸಂಪ್ರದಾಯಗಳು ಇನ್ನಿಲ್ಲವಾಗಿವೆ ಎಂದರು.

ಭರಮಸಾಗರ ಕೆರೆಗೆ ಏತನೀರಾವರಿ ಯೋಜನೆಯಿಂದ ನೀರು ಬಂದ ಮೇಲೆ ಈ ಭಾಗದ ರೈತ ಸಮುದಾಯ ಸಂತೃಪ್ತಿಯಿಂದ ಇದೆ. ಹಳ್ಳಿಗಳಲ್ಲಿಯೂ ಆಧುನಿಕ ಮನೆಗಳು ನಿರ್ಮಾಣವಾಗುತ್ತಿರುವುದು ಸಂತೋಷ ತಂದಿದೆ. ಕೆರೆಗೆ ನೀರು ತುಂಬಿಸುವ ಕೆಲಸದ ಮಧ್ಯೆ ಕೆರೆ ಏರಿ ಬಿರುಕುಬಿಟ್ಟು ಆತಂಕ ಸೃಷ್ಟಿಸಿತು. ಹೀಗಾಗಿ ಕೆರೆಯಲ್ಲಿ ಪೂರ್ಣಪ್ರಮಾಣದ ನೀರು ಸಂಗ್ರಹಿಸಲಾಗಿಲ್ಲ. ಯೋಜನೆಯ ವ್ಯಾಪ್ತಿಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಇವೆ. ಅವುಗಳನ್ನೆಲ್ಲ ಪರಿಹರಿಸುವ ಕೆಲಸ ಮಾಡಲಾಗುವುದು. ದೈವಕೃಪೆಯಿಂದ ಉತ್ತಮ ಮಳೆಯಾಗಿ ತುಂಗಭದ್ರಾ ನದಿಯಲ್ಲಿ ನೀರು ಹರಿದರೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸವನ್ನು ಮಾಡಲಾಗುವುದು. ಈ ಹಿಂದೆ ಸೀಗೇಹಳ್ಳಿಯಲ್ಲಿ ಕುಡಿವ ನೀರಿಗೆ ತೊಂದರೆ ಇದ್ದಾಗ ಮಠದ ಟ್ಯಾಂಕರಿನಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು ಎಂದು ನೆನಪು ಮಾಡಿದರು.ಅಕ್ಕಮಹಾದೇವಿಯ ವಚನಗಳಲ್ಲಿ ದೇವರ ಬಗೆಗೆ ಆಕೆಗಿರುವ ಅದಮ್ಯ ವಿಶ್ವಾಸವನ್ನು ಕಾಣಬಹುದು. ಹಾಗೆಯೇ ರಾಷ್ಟ್ರಕವಿ ಶಿವರುದ್ರಪ್ಪನವರು ಸಹ ಆಸ್ತಿಕರೇ ಆಗಿದ್ದರು. ಎಲ್ಲೋ ಹುಡುಕಿದೆ ಇಲ್ಲದ ದೇವರ ಎಂಬ ಕವಿತೆಯಲ್ಲಿ ಅವರು ದೇವರನ್ನು ನಿರಾಕರಣೆ ಮಾಡಿಲ್ಲ ಎಂದು ವಿಶ್ಲೇಷಿಸಿದರು.

ದೇವಾಲಯ ನಿರ್ಮಾಣದಲ್ಲಿ ಸಹಕರಿಸಿದ ಭಕ್ತರನ್ನು ಶ್ರೀಗಳು ಗೌರವಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಾಲಮ್ಮ ಭೈರಪ್ಪ, ಪಿಡಿಓ ಹನ್ಸಿರಾ ಬಾನು, ಫಾಲಾಕ್ಷಪ್ಪ, ಕುಬೇರಪ್ಪ, ಗ್ರಾಪಂ ಸದಸ್ಯ ಬಸವರಾಜ್‌, ತರಳಬಾಳು ಯೂತ್ಸ್‌ ತಂಡದವರು, ಗ್ರಾಮಸ್ಥರು ಭಾಗವಹಿಸಿದ್ದರು. ದಾವಣಗೆರೆ ಗುರು ಪಂಚಾಕ್ಷರ ಸಂಗೀತ ವಿದ್ಯಾಲಯದ ಟಿ.ಎಚ್.ಎಂ. ಶಿವಕುಮಾರಸ್ವಾಮಿ ತಂಡದವರು ವಚನ ಗೀತೆ ಹಾಡಿದರು. ಗ್ರಾಮದ ವಾಣಿಜ್ಯೋದ್ಯಮಿ ಎಸ್.ಬಿ. ಮಂಜಪ್ಪ ಸ್ವಾಗತಿಸಿದರು. ರಾಜಶೇಖರಯ್ಯ ನಿರೂಪಣೆ ಮಾಡಿದರು.

Share this article