ಚನ್ನಪಟ್ಟಣ: ತಮ್ಮ ಜೀವನ ಪರ್ಯಂತ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಿದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿಯವರ ಆಶಯದಲ್ಲಿ ಇಂದಿನ ಯುವಜನಾಂಗ ಸಾಗಬೇಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ಡಾ. ಮಹಾಂತ ಶಿವಯೋಗಿಗಳು ಮದ್ಯ ಹಾಗೂ ಅಮಲಿನ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ಜೋಳಿಗೆ ಹಿಡಿದು ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಮಾದಕ ಪದಾರ್ಥಗಳ ಸೇವನೆ ವಿರುದ್ಧ ಅವರು ಹೋರಾಟ ಮಾಡಿದರು. ಅವರ ನೆನಪಿಗಾಗಿ ಇಂದು ಅವರ ಜನ್ಮದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಮಾತನಾಡಿ, ವ್ಯಾಪಕ ಮೊಬೈಲ್ ಬಳಕೆ ಇತ್ತೀಚಿಗೆ ವ್ಯಸನವಾಗಿ ಮಾರ್ಪಟ್ಟಿದೆ. ಪ್ರತಿದಿನ ೩-೪ ಗಂಟೆ ಸಮಯ ಮೊಬೈಲ್ ಸ್ಕ್ರೀನ್‌ಗಳಲ್ಲಿ ಕಳೆಯಲಾಗುತ್ತಿದ್ದು, ದಿನದ ಶೇ. ೪೦ರಿಂದ ೬೦ರಷ್ಟು ಸಮಯವನ್ನು ಇದಕ್ಕೆ ವ್ಯಯಿಸಲಾಗುತ್ತಿದೆ. ಇದರ ಪರಿಣಾಮ ಶೇ.೬೫ ಪ್ರತಿಶತ ಜನರು ಮನೋ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು.ಮಾದಕವಸ್ತು ಸೇವನೆ ಮೊದಲು ಹವ್ಯಾಸದಿಂದ ಆರಂಭಗೊಂಡು ವ್ಯಸನದೆಡೆಗೆ ಸಾಗಿಸುತ್ತದೆ. ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗುವ ಪ್ರತಿ ಐದು ಪ್ರಕರಣಗಳಲ್ಲಿ ೨ ಪ್ರಕರಣ ನೇರವಾಗಿ ವ್ಯಸನಕ್ಕೆ ಸಂಬಂಧಿಸಿದಾಗಿರುತ್ತದೆ. ಒತ್ತಡ ಹಾಗೂ ದೈಹಿಕ ಬೇನೆಗಳನ್ನು ಕಡಿಮೆಗೊಳಿಸಲು ಪ್ರಾರಂಭಿಸುವ ಈ ಚಟಗಳು ಮುಂದೆ ವ್ಯಸನವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಂಟಕವಾಗುತ್ತದೆ. ಇವುಗಳಿಂದಾಗಿ ಕೌಟುಂಬಿಕ ಔದ್ಯೋಗಿಕ ಹಾಗೂ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಇವು ಆರೋಗ್ಯಕ್ಕೂ ಮಾರಕ ಎಂದರು.
ತಹಸೀಲ್ದಾರ್ ಗಿರೀಶ್ ಮಾತನಾಡಿ, ಡಾ. ಮಹಾಂತ ಶಿವಯೋಗಿಗಳು ಜೋಳಿಗೆ ಹಿಡಿದು ಸಹಸ್ರಾರು ಜನರನ್ನು ದುಶ್ಚಟಗಳಿಂದ ಮುಕ್ತಮಾಡಿದರು. ಅವರು ತಮ್ಮ ಜೀವನವನ್ನು ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಮುಡಿಪಾಗಿಟ್ಟಿದ್ದರು, ಯುವ ಜನಾಂಗ ಡಾ. ಮಹಾಂತ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯಬೇಕು, ಅವರ ಭಾವಚಿತ್ರವೇ ಪಾಸಿಟಿವ್ ವೈಬ್ರೇಷನ್ ಹೊರಹೊಮ್ಮಿಸುತ್ತವೆ ಎಂದರು.ಇದೇ ಸಂದರ್ಭದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಾನಪದ ಲೋಕದ ಕ್ಯೂರೇಟರ್ ಡಾ. ಯು.ಎಂ.ರವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಷಾಮಾಲಿನಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥಡಾ. ಜನದೀಶ್ ನಡುವಿನಮಠ್, ಎನ್‌ಸಿಸಿ ಅಧಿಕಾರಿ ಚಂದ್ರು, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಈಶ್ವರ್ ನಾಯಕ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಇತರರಿದ್ದರು.ಪೊಟೋ೧ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆಯನ್ನು ಶಾಸಕ ಯೋಗೇಶ್ವರ್ ಉದ್ಘಾಟಿಸಿದರು.