ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಿ

KannadaprabhaNewsNetwork |  
Published : Mar 23, 2026, 01:30 AM IST
ಪೋಟೋ 2 : ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ಶ್ರೀ ಅಂಜನೇಯಸ್ವಾಮಿ ಹಾಗೂ ಶ್ರೀ ಬಸವೇಶ್ವರಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ  ಮಾತನಾಡಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು

ದಾಬಸ್‍ಪೇಟೆ: ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ಶ್ರೀ ಅಂಜನೇಯಸ್ವಾಮಿ ಹಾಗೂ ಶ್ರೀ ಬಸವೇಶ್ವರಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜನರ ಭಾವನೆಗಳಿಗೆ ಅನುಸಾರವಾಗಿ ಹುಟ್ಟಿಕೊಂಡಿರುವ ಎಲ್ಲ ಜಾತಿ, ಧರ್ಮ, ಬೋಧನೆ ನಡೆಸುತ್ತಿವೆ. ವಿವಿಧ ಧರ್ಮಗಳು ನಾಡಿನಲ್ಲಿದ್ದರೂ ಕೊನೆಗೆ ಐಕ್ಯಸ್ಥಾನ ಮಾತ್ರ ಒಂದೇ ಆಗಿದೆ. ನೊಂದ ಜೀವಗಳನ್ನು ಹಸನು ಮಾಡುವ ಶಕ್ತಿಯುಳ್ಳ ನಮ್ಮ ಸಂಸ್ಕೃತಿ ಅರ್ಥೈಸಿಕೊಳ್ಳಲು ವಿದೇಶಿಗರು ಒಲವು ತೋರುತ್ತಿರುವುದು ಹೆಮ್ಮೆಯ ಸಂಗತಿ. ಧರ್ಮದ ಜಾಗೃತಿ, ಮೌಲ್ಯ ಉಳಿಸಿಕೊಂಡು, ಬದುಕಿಗೆ ಅರ್ಥ ತಂದುಕೊಡುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ ಎಂದು ಕರೆ ನೀಡಿದರು.

ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಯುವಕರು ದುಶ್ಚಟಗಳಿಗೆ ಮಾರುಹೋಗಿ ಅಮೂಲ್ಯ ಜೀವನ ನಾಶಪಡಿಸಿಕೊಳ್ಳುತ್ತಿದ್ದು, ಅವರನ್ನು ಸರಿದಾರಿಗೆ ಕರೆತರುವ ಅಗತ್ಯವಿದೆ. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಜೀವನ ಅರ್ಥಪೂರ್ಣ. ಗಳಿಸಿದ್ದನ್ನು ಹಿತಮಿತವಾಗಿ ಬಳಸಿಕೊಂಡು ಪರೋಪಕಾರ, ಸಂತೋಷ, ನೆಮ್ಮದಿಯ ಜೀವನ ನಡೆಸಲು ಸಂಕಲ್ಪಿಸಬೇಕಿದೆ ಎಂದರು.

ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಚಂಚಲ ಮನಸ್ಸಿನ ಮೇಲೆ ಹತೋಟಿ ಸಾಧಿಸಿ ಧರ್ಮ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಸಚ್ಚಾರಿತ್ರ್ಯದ ಜೀವನ ಸಾಗಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕಿದೆ. ತಾಯಿಯಾದವಳು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡುವಲ್ಲಿ ಕಾಳಜಿ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಚ್ಚಾಗಿ ವಾಲುತ್ತಿರುವುದು ದೇಶದ ಸಂಸ್ಕೃತಿ ನಾಶವಾಗಲು ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಎನ್ ಪಿಎ ಮಾಜಿ ಅಧ್ಯಕ್ಷ ಮಲ್ಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ತಾಪಂ ಮಾಜಿ ಸದಸ್ಯ ನಾಗಭೂಷಣ್, ವಿಕೇರ್ ಶಾಲೆ ಸಂಸ್ಥಾಪಕ ಅಂಚೆಮನೆ ರಾಜಣ್ಣ, ರೇಣುಕಪ್ಪ ಸೇರಿದಂತೆ ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

ಪೋಟೋ 2 :

ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ಶ್ರೀ ಅಂಜನೇಯಸ್ವಾಮಿ ಹಾಗೂ ಶ್ರೀ ಬಸವೇಶ್ವರಸ್ವಾಮಿ ದೇಗುಲ ಜೀರ್ಣೋದ್ದಾರ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ
ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ಸಮಾಜ ನಿರ್ಮಾಣ: ಹನುಮಂತಯ್ಯ