ರಾಣಿಬೆನ್ನೂರು: ಅಡಿಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಸಾಕಷ್ಟು ರೈತರಿಗೆ ಜೀವನಾಧಾರವಾಗಿದೆ ಎಂದು ತೋಟಗಾರಿಕೆ ವಿಜ್ಞಾನಿ ಡಾ.ಸಂತೋಷ ಎಚ್.ಎಂ. ಹೇಳಿದರು.
ಅಡಿಕೆ ಬೆಳೆಯಲ್ಲಿ ಪೋಷಕಾಂಶದ ಅಸಮತೋಲನೆಯಿಂದ ಹಿಡಿ ಮುಂಡಿಗೆ, ಚಂಡೆ ತಿರುಗುವಿಕೆ, ಓರೆಗಣ್ಣು ಮತ್ತು ಕಾಯಿ ಒಡೆಯುವುದು ಕಂಡು ಬರುತ್ತದೆ. ಗದ್ದೆ ಪರಿವರ್ತಿತ ತೋಟಗಳು, ಮಣ್ಣಿನಲ್ಲಿ ನೀರು ನಿಲ್ಲುವಿಕೆಯಿಂದ ಬೇರಿನ ಬೆಳವಣಿಗೆ ಕುಂಠಿತಗೊಳ್ಳುವುದರಿಂದ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತವೆ. ಪೋಷಕಾಂಶ ಮತ್ತು ಬಸಿಗಾಲುವೆ ನಿರ್ವಹಣೆ ಮಾಡುವುದರಿಂದ ಈ ಸಮಸ್ಯೆ ನಿವಾರಿಸಬಹುದು. ಹಿಡಿ ಮುಂಡಿಗೆ ರೋಗದಿಂದ ಎಲೆಗಳ ಗಾತ್ರ ಚಿಕ್ಕದಾಗಿ ಕಡು ಹಸಿರು ಬಣ್ಣಕ್ಕೆ ತಿರುಗುತ್ತವೆ. ಸತುವಿನ ಕೊರತೆಯು ಇದಕ್ಕೆ ಪ್ರಮುಖ ಕಾರಣವಾಗಿದ್ದು ಪ್ರತಿ ಮರದ ಬುಡಕ್ಕೆ 10 ಗ್ರಾಂ ಸತುವಿನ ಸಲ್ಪೇಟ್ ಹಾಕುವುದರಿಂದ ಪ್ರಾರಂಭಿಕ ಹಂತದಲ್ಲಿರುವ ಮರ ಸರಿಪಡಿಸಬಹುದು. ಹೆಚ್ಚು ಬಾಧಿತವಿರುವ ಮರಗಳಿಗೆ ಶೇ. 0.5 ರಷ್ಟು ಸತುವಿನ ಸಲ್ಪೇಟ್‌ನ್ನು ಸಿಂಪರಣೆ ಮಾಡುವುದರಿಂದ ಸಾಮಾನ್ಯ ಗಾತ್ರದ ಹೊಸ ಎಲೆ ಪಡೆಯಬಹುದು. ಕಾಯಿ ಒಡೆಯುವ ಸಮಸ್ಯೆಯು ಪೋಟ್ಯಾಷಿಯಂ ಮತ್ತು ಬೋರಾನ್ ಕೊರತೆಯಿಂದ ಉಂಟಾಗುತ್ತಿದ್ದು ಇದರ ನಿರ್ವಹಣೆಗೆ ಶೇ.0.2 ರಷ್ಟು ಬೋರಾಕ್ಸ್ನ್ನುಸಿಂಪರಣೆ ಮಾಡಬೇಕು. ತೋಟದಲ್ಲಿ ಬಸಿಗಾಲುವೆ ನಿರ್ಮಿಸಬೇಕು. ಸಸಿಗಳ ಆರೋಗ್ಯಕರ ಬೆಳವಣಿಗೆಗೆ ಸರಿಯಾದ ಬಸಿಗಾಲುವೆ ಅತ್ಯಗತ್ಯವಾಗಿದ್ದು, ನೀರು ಬಸಿದು ಹೋಗುವ ಮಣ್ಣಿರುವ ತೋಟದಲ್ಲಿ ಪ್ರತಿ ಎರಡು ಸಾಲಿಗೊಂದರಂತೆ ಬಸಿಗಾಲುವೆ ಅವಶ್ಯವಿದೆ. ಗಡುಸು ಮಣ್ಣಿರುವ ತೋಟದಲ್ಲಿ ಪ್ರತಿ ಸಾಲಿಗೊಂದು ಬಸಿಗಾಲುವೆ ಆಳವಾಗಿ ನಿರ್ಮಿಸಬೇಕು ಎಂದರು.
ಹಿತ್ತಲ ಕೋಳಿ ಸಾಕಾಣಿಕೆ ಬಗ್ಗೆ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾಹಿತಿ ನೀಡಿದರು.ಗ್ರಾಮದ ಸುಮಾರು 30 ಅಡಿಕೆ ಬೆಳೆಗಾರರು ತರಬೇತಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.