ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳಲ್ಲಿ ಜಿಲ್ಲೆಯ ಸಾಕಷ್ಟು ರೈತರು ತೊಡಗಿಸಿಕೊಂಡಿದ್ದು ಅಂತಹ ರೈತರಿಗೆ ಕೃಷಿ ಚಟುವಟಿಕೆ ಜೊತೆಗೆ ಜಾನುವಾರು ಸಾಕಾಣಿಕೆಗೆ ಪ್ರೋತ್ಸಾಹ ನೀಡಿ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೊಡ್ಡಬಳ್ಳಾಪುರ: ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳಲ್ಲಿ ಜಿಲ್ಲೆಯ ಸಾಕಷ್ಟು ರೈತರು ತೊಡಗಿಸಿಕೊಂಡಿದ್ದು ಅಂತಹ ರೈತರಿಗೆ ಕೃಷಿ ಚಟುವಟಿಕೆ ಜೊತೆಗೆ ಜಾನುವಾರು ಸಾಕಾಣಿಕೆಗೆ ಪ್ರೋತ್ಸಾಹ ನೀಡಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ 2024-25ನೇ ಸಾಲಿನ ವಿಸ್ತರಣಾ ಚಟುವಟಿಕೆಗಳ ಹಾಗೂ ಪಶುವೈದ್ಯಕೀಯ ಸಿಬ್ಬಂದಿಯವರ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
21ನೇ ಜಾನುವಾರು ಗಣತಿ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಕಾರ್ಯಕ್ಕೆ ಕಾರಣರಾದ ಪಶು ವೈದ್ಯಾಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಾ ಜಾನುವಾರು ಸಾಕಾಣಿಕೆಯಲ್ಲಿ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಜಿಲ್ಲೆ ಉತ್ತಮ ಹೆಸರು ಪಡೆಯಬೇಕು. ಹಾಗಾಗಿ ಪಶು ವೈದ್ಯಾಧಿಕಾರಿಗಳ ಸೇವೆ ಕೂಡ ಮುಖ್ಯ ಎಂದರು.
ರೈತರಿಗೆ ಜಾನುವಾರು ಸಾಕಾಣಿಕೆ ಕುರಿತಂತೆ ಮಾಹಿತಿ, ತರಬೇತಿ, ಕಾರ್ಯಾಗಾರಗಳನ್ನು ಏರ್ಪಡಿಸಿ ಸರ್ಕಾರಿ ಸಾಲ ಸೌಲಭ್ಯ, ಪ್ರೊತ್ಸಾಹ ಧನದ ಬಗ್ಗೆ ಮಾಹಿತಿ ನೀಡಿ, ಜಾನುವಾರುಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸಲು ಕಾಲಕಾಲಕ್ಕೆ ಲಸಿಕೆ ಹಾಕಬೇಕು. ಹಾಲು ಉತ್ಪಾದನೆ ಹೆಚ್ಚಿಸಬೇಕು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೊಟ್ಟಿಗೆ ಗೊಬ್ಬರ ಬಳಸಿ ಪೌಷ್ಟಿಕ ಆಹಾರ ಉತ್ಪನ್ನ, ಗುಣಮಟ್ಟದ ತರಕಾರಿ ಬೆಳೆದು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಗುರಿ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕಾರ ಕೂಡ ಮುಖ್ಯ ಎಂದರು.
ಕುಡಿವ ನೀರು, ಮೇವು ಪೂರೈಕೆಗೆ ಆದ್ಯತೆ:
ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಆವರಣಗಳಲ್ಲಿರುವ ಜಾನುವಾರುಗಳ ಕುಡಿಯುವ ನೀರು ತೊಟ್ಟಿಗಳನ್ನ ಸ್ವಚ್ಛಗೊಳಿಸಿ ನೀರು ಹಾಯಿಸಬೇಕು. ಜಿಲ್ಲೆಯ ಯಾವುದೇ ಭಾಗದಿಂದ ಕುಡಿವ ನೀರಿನ ಸಮಸ್ಯೆ ಇದೆ ಎಂದು ಸಾರ್ವಜನಿಕರು ನನ್ನ ಬಳಿ ಮನವಿ ಮಾಡಬಾರದು. ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
2.90 ಲಕ್ಷ ರೈತರಿಂದ ಪಶುಸಂಗೋಪನೆ:
ಪಶು ಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ 2,90,551 ರೈತರು ಪಶುಸಂಗೋಪನೆಯಲ್ಲಿ ತೊಡಗಿಕೊಂಡಿದ್ದಾರೆ. ಪಶು ಇಲಾಖೆಯಲ್ಲಿ ಒಟ್ಟು 105 ಪಶು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು 21ನೇ ಜಾನುವಾರು ಗಣತಿ ಪ್ರಕಾರ 1,70,720 ದನಗಳು, 14,924 ಎಮ್ಮೆಗಳು, 1,17,715 ಕುರಿಗಳು, 95 ಸಾವಿರ ಮೇಕೆಗಳು ಜಿಲ್ಲೆಯಲ್ಲಿದೆ. 2,93,876 ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆಯನ್ನು ನೀಡಿದ್ದೇವೆ. ಜಿಲ್ಲೆಯಲ್ಲಿ 5.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಜಾನುವಾರು ವಿಮೆ ಸೌಲಭ್ಯವನ್ನು ಎಪಿಎಲ್ ಪಡಿತರ ಚೀಟಿಗೆ ಶೇ.50, ಬಿಪಿಎಲ್ ಪಡಿತರ ಚೀಟಿಗೆ ಶೇ.75 ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ಉಪಕಾರ್ಯದರ್ಶಿ ಟಿ.ಕೆ ರಮೇಶ್, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ.ಜಗದೀಶ್ ಕುಮಾರ್, ದೇವನಹಳ್ಳಿ ತಹಸೀಲ್ದಾರ್ ಬಾಲಕೃಷ್ಣ, ಇಒ ಶ್ರಿನಾಥ್‌ಗೌಡ, ಜಿಲ್ಲೆಯ ಪಶುವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.