ತಾಯಿ ಮತ್ತು ತಾಯಿನಾಡು ಸ್ಥಾನಕ್ಕಿಂತ ಮಿಗಿಲು ಎಂದು ಶ್ರೀರಾಮಚಂದ್ರ ತನ್ನ ತಮ್ಮ ಲಕ್ಷ್ಮಣನಿಗೆ ಲಂಕೆ ಬಿಟ್ಟು ಬರುವಾಗ ಭಾರತ ದೇಶದ ಬಗ್ಗೆ ಮನದಟ್ಟು ಮಾಡಿಕೊಡುತ್ತಾನೆ
ಗಂಗಾವತಿ: ಸುಸಂಸ್ಕೃತರಾಗಿ ಬದುಕುವುದೇ ಹಿಂದುತ್ವವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಹಾಗೂ ಗ್ರಾಮ ವಿಕಾಸ ವಿಭಾಗದ ಪ್ರಮುಖ ದಾಮೋದರ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ವರ್ಷದ ಹಿನ್ನೆಲೆಯಲ್ಲಿ ಕನಕಗಿರಿ ರಸ್ತೆಯ ಬಸಲಿಂಗಪ್ಪ ವೀರಶೆಟ್ಟಿ ಹತ್ತಿಮಿಲ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಗಂಗಾವತಿ ನಗರದ ಪಶ್ಚಿಮ ಭಾಗದ ಪ್ರಶಾಂತನಗರ ವಸತಿಯ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜ ಮೃತ್ಯುಂಜಯ ಸಮಾಜವಾಗಿದೆ. ಹಿಂದೂ ಎಂಬುದು ಅಳಿಸಲಾಗದ ಸಂಸ್ಕೃತಿ.ಈ ದೇಶದ ಸಂಸ್ಕೃತಿಯೇ ಹಿಂದೂ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ತಾಯಿ ಮತ್ತು ತಾಯಿನಾಡು ಸ್ಥಾನಕ್ಕಿಂತ ಮಿಗಿಲು ಎಂದು ಶ್ರೀರಾಮಚಂದ್ರ ತನ್ನ ತಮ್ಮ ಲಕ್ಷ್ಮಣನಿಗೆ ಲಂಕೆ ಬಿಟ್ಟು ಬರುವಾಗ ಭಾರತ ದೇಶದ ಬಗ್ಗೆ ಮನದಟ್ಟು ಮಾಡಿಕೊಡುತ್ತಾನೆ. ಇಂತ ಭಾರತದಲ್ಲಿ ಸುಸಂಸ್ಕೃತರಾಗಿ ಬದುಕುವುದೇ ಹಿಂದುತ್ವ. ಹಿಂದುತ್ವ ಎಂದರೆ ಕೇವಲ ನನ್ನ ಮನೆಗಷ್ಟೆ ಸಿಮೀತವಾಗಿಲ್ಲ. ಸಮಾಜವು ಸುಸಂಸ್ಕೃತವಾಗಬೇಕು. ಎಲ್ಲರು ಸಾಮರಸ್ಯದಿಂದ ಬದುಕುವುದೆ ಹಿಂದುತ್ವವಾಗಿದೆ ಎಂದರು.
ಸುಳೇಕಲ್ಲ ಮಠದ ಭುವನೇಶ್ವರ ಸ್ವಾಮಿಗಳು ಮಾತನಾಡಿ, ಎಲ್ಲರು ಸಾಮರಸ್ಯದಿಂದ ಜೀವನ ನಡೆಸಿ ಸಂಘದ ಆಶಯದಂತೆ ನಡೆದುಕೊಳ್ಳುವ ಅವಶ್ಯಕತೆ ಅತ್ಯವಶ್ಯವಾಗಿದೆ ಎಂದರು.
ಹೆಬ್ಬಾಳ ಮಠದ ನಾಗಭೂಷಣ ಸ್ವಾಮಿಗಳು, ಸಮಿತಿ ಉಪಾಧ್ಯಕ್ಷೆ ಹಾಗೂ ನಿವೃತ್ತ ಪ್ರಾಚಾರ್ಯ ಡಾ.ವಿಜಯಲಕ್ಷ್ಮೀ, ಕಾರ್ಯದರ್ಶಿ ಸಂತೋಷ ಮ್ಯಾಗೇರಿ ಸಮಿತಿ ಉಪಾಧ್ಯಕ್ಷ ಟಿ.ಆರ್. ರಾಯಬಾಗಿ, ಗುರಪ್ಪ ಪಟ್ಟಣಶೆಟ್ಟಿ, ರವಿ ಪವಾಡಶೆಟ್ಟಿ, ಅಂದಪ್ಪ, ಬಸವರಾಜ ನಿಟ್ಟಾಲಿ, ವೇಣು, ರಾಘು ಕಟ್ಟಿಮನಿ, ಡಾ. ಅಮರ್ ಪಾಟೀಲ್, ಮುಖಂಡ ಮನೋಹರಗೌಡ ಹೇರೂರು, ಅಶೋಕ ರಾಯ್ಕರ್, ನಗರಸಭೆ ಮಾಜಿ ಸದಸ್ಯ ಪರಶುರಾಮ ಮಡ್ಡೇರ್, ಶಿವು ಎಲಿಗಾರ, ಕಿರಣ, ಅರ್ಜುನ ರಾಯ್ಕರ್ ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ,ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಮಾತೆಯರು, ಯುವಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.