ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಆದೇಶ ನಾಲ್ಕು ಕಡೆ ಎಲ್‌ಕೆಜಿ ಪ್ರಾರಂಭ

KannadaprabhaNewsNetwork | Updated : Jul 20 2024, 09:06 AM IST

ಸಾರಾಂಶ

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅದೇಶ ಮಾಡಿದ್ದು, ಅದರಂತೆ ತಾಲೂಕಿನ 4 ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರದಿಂದ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ  

ಚನ್ನಗಿರಿ  : ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅದೇಶ ಮಾಡಿದ್ದು, ಅದರಂತೆ ತಾಲೂಕಿನ 4 ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರದಿಂದ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಎಲ್.ಕೆ.ಜಿ. ತರಗತಿ ಪ್ರಾರಂಭೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸ್ಥಿತಿವಂತ ಪೋಷಕರು ತಮ್ಮ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿಯೇ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡುತ್ತಿದ್ದಾರೆ. ಆದರೆ, ಬಡವರ್ಗದ ಜನರ ಮಕ್ಕಳಿಗೆ ಉಚಿತವಾಗಿ ಪೂರ್ವ ಪ್ರಾಥಮಿಕದಲ್ಲಿಯೇ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್‌ಕೆಜಿ ತರಗತಿ ಆರಂಭದ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಸಂತಸದ ವಿಷಯ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ ಮಾತನಾಡಿ, ಎಲ್.ಕೆ.ಜಿ. ತರಗತಿಗಳನ್ನು ಚನ್ನಗಿರಿ ಪಟ್ಟಣದಲ್ಲಿ 1 ಹಾಗೂ ಪಾಂಡೋಮಟ್ಟಿ, ಹರೋನಹಳ್ಳಿ, ಬೆಳಲಗೆರೆ ಗ್ರಾಮಗಳ ತಲಾ ಒಂದೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗಿದೆ. ಚನ್ನಗಿರಿ ಪಟ್ಟಣದ ಎಲ್.ಕೆ.ಜಿ. ತರಗತಿಗೆ ಈಗಾಗಲೇ 17 ಪುಟಾಣಿಗಳು ದಾಖಲಾಗಿದ್ದಾರೆ. ತರಗತಿಗಳನ್ನು ನಡೆಸಲು ಬೇಕಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾರಂಭಿಸಿರುವ ಎಲ್.ಕೆ.ಜಿ. ತರಗತಿಗಳಿಗೂ ದಾಖಲಾತಿಯ ಕಾರ್ಯ ಈ ದಿನದಿಂದ ಪ್ರಾರಂಭವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಕುಬೇರಪ್ಪ, ಬಿ.ಆರ್.ಸಿ.ನಾಗರಾಜ್, ಮುಖ್ಯ ಶಿಕ್ಷಕ ರಾಜಪ್ಪ, ಶಿಕ್ಷಕರಾದ ಆಶಾ, ಪದ್ಮ, ಸವಿತಾ, ರಮ್ಯ, ಜ್ಯೋತಿ, ರಂಗನಾಥ್, ಸಂಗೀತಾ ಸೇರಿದಂತೆ ವಿದ್ಯಾರ್ಥಿಗಳ ಪೋಷಕರುಗಳು ಹಾಜರಿದ್ದರು.

ಕೋಟ್‌ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪ್ರತಿಭಾವಂತ ಶಿಕ್ಷಕರಿದ್ದಾರೆ. ಪೋಷಕರು ಸಹಾ ಸರ್ಕಾರಿ ಶಾಲೆ ಎಂದು ತಾತ್ಸಾರದಿಂದ ನೋಡದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲು ಮುಂದಾಗಬೇಕು

- ಎಲ್‌.ಜಯಪ್ಪ, ಬಿಇಒ, ಚನ್ನಗಿರಿ ತಾಲೂಕು

Share this article