ಸ್ವಉದ್ಯೋಗ ಪ್ರೋತ್ಸಾಹಕ್ಕೆ ನೀಡುವ ಸಾಲ ಸದುಪಯೋಗವಾಗಲಿ: ಬಸವರಾಜ್

KannadaprabhaNewsNetwork | Published : Aug 3, 2024 12:39 AM

ಸಾರಾಂಶ

ಚಿಕ್ಕಮಗಳೂರು, ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಯಡಿ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡಿ ಅವರ ಜೀವನಮಟ್ಟ ಸುಧಾರಣೆಗೆ ಉದ್ಯೋಗಗಳ ಪ್ರೋತ್ಸಾಹಿಸಲು ಕ್ರಮ ವಹಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಹೇಳಿದ್ದಾರೆ.

ಸ್ವಯಂ ಉದ್ಯೋಗ ಕಾರ್ಯಕ್ರಮದ ಡೇನಲ್ಮ್‌ ಯೋಜನೆ ಟಾಸ್ಕ್ ಫೋರ್ಸ್ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಯಡಿ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡಿ ಅವರ ಜೀವನಮಟ್ಟ ಸುಧಾರಣೆಗೆ ಉದ್ಯೋಗಗಳ ಪ್ರೋತ್ಸಾಹಿಸಲು ಕ್ರಮ ವಹಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಹೇಳಿದ್ದಾರೆ.

ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಉದ್ಯೋಗ ಕಾರ್ಯಕ್ರಮದ ಡೇನಲ್ಮ್‌ ಯೋಜನೆ ಟಾಸ್ಕ್ ಫೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಸಬ್ಸಿಡಿ ಅಡಿ ಬ್ಯಾಂಕ್‌ಗಳಲ್ಲಿ ಸಾಲ ನೀಡ ಲಾಗುತ್ತಿತ್ತು, ಆದರೆ, ಈಗ ಈ ವ್ಯವಸ್ಥೆ ಬದಲಾಗಿದೆ. ಸಾಲ ಪಡೆದವರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದವರಿಗೆ ಬಡ್ಡಿಯಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.

ಪಡೆದ ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸದೇ ಉದ್ದೇಶಿತ ಸ್ವ-ಉದ್ಯೋಗ ನಡೆಸಲು ಬಳಸಿ ನಿಗದಿತ ಸಮಯದಲ್ಲಿ ಸಾಲ ಮರು ಪಾವತಿ ಮಾಡಿದರೆ ಇತರೆಯವರು ಅರ್ಜಿ ಸಲ್ಲಿಸಿದಾಗ ಸಾಲ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಸಾಲ ಪಡೆದ ಫಲಾನುಭವಿಗಳು ಸ್ಥಾಪಿಸಿದ ಸ್ವಉದ್ಯೋಗದಲ್ಲಿ ಲಾಭ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲ ಪಡೆದು ಮುಂದುವರಿಯಬೇಕು. ಸ್ವಉದ್ಯೋಗದಲ್ಲಿ ಅನುಭವ ಇಲ್ಲದವರು ಉದ್ಯಮಶೀಲತಾ ತರಬೇತಿ ಪಡೆವ ಮೂಲಕ ಉದ್ದಿಮೆಗಳಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.ಬಡವರಾಗಿ ಹುಟ್ಟಿ ಬಡವರಾಗಿಯೇ ಸಾಯಬೇಕೆಂಬ ಕಾನೂನಿಲ್ಲ. ಈ ರೀತಿ ಸಾಲ ಸೌಲಭ್ಯ ಪಡೆದು ತಮ್ಮ ಜೀವನ ಮಟ್ಟ ಸುಧಾರಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದರು.ಸ್ವಯಂ ಉದ್ಯೋಗ ಯೋಜನೆಯಡಿ ಕನಿಷ್ಟ 2 ಲಕ್ಷ ರು.ವರೆಗೆ ಸಾಲ ನೀಡಲು ಅವಕಾಶವಿದ್ದು, ಇಎಂಐ ಗಳನ್ನು ಸರಿಯಾಗಿ ಪಾವತಿ ಮಾಡಿದವರಿಗೆ ಇದಕ್ಕೆ ಬಡ್ಡಿ ಸಹಾಯಧನ ದೊರೆಯಲಿದೆ. ಬಡ ಜನರು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಬಡ್ಡಿ ಕಟ್ಟಿ ತಮ್ಮ ಜೀವನ ಹಾಳು ಮಾಡಿಕೊಳ್ಳುವ ಬದಲು ಇಂತಹ ಯೋಜನೆ ಗಳ ಸದುಪಯೋಗ ಪಡಿಯಿರಿ ಎಂದು ಹೇಳಿದರು.ಈ ಸಂಬಂಧ ನಗರಸಭೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 72 ಅರ್ಜಿಗಳು ಬಂದಿವೆ. ಈ ಪೈಕಿ 20 ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸುವುದಾಗಿ ಕೋರಿರುವ ಅರ್ಜಿಗಳಿದ್ದು ಸಮಿತಿ ಇಂದು ಪರಿಶೀಲಿಸಿ ಬ್ಯಾಂಕ್‌ಗಳಿಗೆ ಎಲ್ಲಾ ಅರ್ಜಿ ಗಳನ್ನು ರವಾನಿಸಿದ್ದು, ಬ್ಯಾಂಕ್‌ಗಳ ಮೂಲಕ ಶಿಸ್ತಿನ ಹಣಕಾಸು ವ್ಯವಹಾರ ನಡೆಸಿದರೆ ಮುಂದೆ ನಿಮಗೆ ಆರ್ಥಿಕ ಸೌಲಭ್ಯ ಸುಲಭವಾಗಿ ದೊರೆಯುತ್ತದೆ ಎಂದರು.ಬ್ಯಾಂಕಿನಲ್ಲಿ ಉಳ್ಳವರು ಇಟ್ಟ ಹಣ ಸಾಮಾಜಿಕ ಸಮತೋಲನಕ್ಕೆ ಬಳಕೆ ಮಾಡಲು ಈ ಯೋಜನೆ ಸಹಕಾರಿ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಸರ್ಕಾರದ ಸವಲತ್ತು ಪಡೆಯುವ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ತಮ್ಮ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಅರಿವು ಮೂಡಿಸಬೇಕು. ಮನೆ ಸುತ್ತಮುತ್ತ ಪರಿಸರ ಸ್ವಚ್ಛವಾಗಿದ್ದರೆ ರೋಗ ರುಜಿನಗಳು ಬರದಂತೆ ತಡೆಯಬಹುದು ಎಂದರು.ಕಸವನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರ ಮಾಲಿನ್ಯ ಉಂಟು ಮಾಡುವ ಬಗ್ಗೆ ವಾರ್ಡ್‌ನ ಸದಸ್ಯರಿಗೆ ಅಥವಾ ನಗರಸಭೆ ಆರೋಗ್ಯ ನಿರೀಕ್ಷಕರಿಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು, ಸ್ವಚ್ಛ ನಗರವಾಗಿಸಲು ನಾಗರಿಕರು ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ರುಡ್‌ಸೆಟ್ ನಿರ್ದೇಶಕ ಯೋಗೇಂದ್ರ, ಕೈಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಶಿವಲಿಂಗಯ್ಯ ಸೇರಿದಂತೆ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.1 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆಯಲ್ಲಿ ನಡೆದ ಸ್ವಯಂ ಉದ್ಯೋಗ ಕಾರ್ಯಕ್ರಮದ ಡೇನಲ್ಮ್‌ ಯೋಜನೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಪೌರಾಯುಕ್ತ ಬಿ.ಸಿ. ಬಸವರಾಜ್‌ ಮಾತನಾಡಿದರು.

Share this article