ಕ್ರಿಯಾಯೋಜನೆ ಸಲ್ಲಿಸದ ಸ್ಥಳೀಯ ಸಂಸ್ಥೆಗಳು; ಮೂಲಸೌಕರ್ಯಕ್ಕಾಗಿ ಎಚ್‌ಡಿಕೆಯಿಂದ ೯೫ ಕೋಟಿ ರು. ಅನುದಾನ ಭರವಸೆ

KannadaprabhaNewsNetwork | Published : Apr 28, 2025 12:52 AM

ಸಾರಾಂಶ

ನಗರಸಭೆಯವರು ೨೦ ಕೋಟಿ ರು., ಪುರಸಭೆಗಳು ತಲಾ ೧೦ ಕೋಟಿ ರು.ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಹಾಗೂ ಇನ್ನಿತರೆ ಮೂಲಸೌಕರ್ಯಗಳ ಕಾಮಗಾರಿಗಳ ಕ್ರಿಯಾಯೋಜನೆಯೊಂದಿಗೆ ರೇಖಾ ಅಂದಾಜು ತಯಾರಿಸಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಚಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಎಸ್‌ಎಫ್‌ಸಿ ಅನುದಾನ ಮಂಜೂರು ಮಾಡುವ ಸಂಬಂಧ ಬೆಳ್ಳೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿ ಉಳಿದ ನಗರ, ಸ್ಥಳೀಯ ಸಂಸ್ಥೆಗಳಿಂದ ಇದುವರೆಗೂ ಪ್ರಸ್ತಾವನೆಯೇ ಸಲ್ಲಿಕೆಯಾಗದಿರುವುದು ಬೆಳಕಿಗೆ ಬಂದಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ೯೫ ಕೋಟಿ ರು.ಗಳನ್ನು ಮಂಜೂರು ಮಾಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದರು.

ಆದ್ದರಿಂದ ನಗರಸಭೆಯವರು ೨೦ ಕೋಟಿ ರು., ಪುರಸಭೆಗಳು ತಲಾ ೧೦ ಕೋಟಿ ರು.ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಹಾಗೂ ಇನ್ನಿತರೆ ಮೂಲಸೌಕರ್ಯಗಳ ಕಾಮಗಾರಿಗಳ ಕ್ರಿಯಾಯೋಜನೆಯೊಂದಿಗೆ ರೇಖಾ ಅಂದಾಜು ತಯಾರಿಸಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಚಿಸಿದ್ದರು.

ಇದುವರೆಗೆ ಬೆಳ್ಳೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿ ಉಳಿದ ನಗರ, ಸ್ಥಳೀಯ ಸಂಸ್ಥೆಗಳ ಪ್ರಸ್ತಾವನೆಗಳು ಸಲ್ಲಿಕೆಯಾಗಿಲ್ಲ. ಮಂಡ್ಯ ನಗರಸಭೆ, ಮಳವಳ್ಳಿ ಹಾಗೂ ಪಾಂಡವಪುರ ಪುರಸಭೆಗಳಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. ಉಳಿದಂತೆ ಮದ್ದೂರು, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ಪುರಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜೆಡಿಎಸ್ ಅಧಿಕಾರದಲ್ಲಿರುವ ನಗರಸಭೆ, ಪುರಸಭೆಗಳಿಂದಲೇ ಮೂಲಸೌಕರ್ಯಗಳ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಕೆಯಾಗದಿರುವುದು ಅಚ್ಚರಿಗೂ ಕಾರಣವಾಗಿದೆ.

ಮಂಡ್ಯ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅಧಿಕಾರಿಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ವೇಳೆ ಎಂ.ವಿ.ಪ್ರಕಾಶ್ ಅವರ ಬೆಂಬಲಕ್ಕೆ ನಿಂತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಖುದ್ದು ಹಾಜರಾಗಿ ನಗರಸಭೆಗೆ ಗದ್ದುಗೆಗೆ ಏರಿಸಿದ್ದರೂ ಕ್ರಿಯಾಯೋಜನೆ ಸಲ್ಲಿಕೆಗೆ ಉದಾಸೀನ ಧೋರಣೆ ತಳೆದಿರುವುದು ನಗರದ ಅಭಿವೃದ್ಧಿ ಬಗೆಗಿನ ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಕ್ರಿಯಾಯೋಜನೆ ಸಲ್ಲಿಸುವಂತೆ ೨೪.೯.೨೦೨೪ರಲ್ಲೇ ಪತ್ರ ಬರೆದು ಕ್ರಿಯಾಯೋಜನೆ ಕೋರಿದ್ದರೂ ಇದುವರೆಗೂ ಕ್ರಿಯಾಯೋಜನೆ ಸಲ್ಲಿಕೆ ವಿಳಂಬಕ್ಕೆ ಕಾರಣವೇನೆಂಬುದು ತಿಳಿಯದಾಗಿದೆ. ರಾಜ್ಯಸರ್ಕಾರದಿಂದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂಬ ಬೇಸರ ಒಂದೆಡೆಯಾದರೆ, ಬಿಡುಗಡೆಯಾಗಬಹುದಾದ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧವಾಗದಿರುವುದು ಮತ್ತೊಂದೆಡೆ ವಿಪರ್ಯಾಸಕ್ಕೂ ಕಾರಣವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಪಕ್ಷ ಯಾವುದೇ ಇರಲಿ, ಅಧಿಕಾರಿಗಳು ಅಭಿವೃದ್ಧಿ ಬಗ್ಗೆ ಬೇಜವಾಬ್ದಾರಿ ಪ್ರದರ್ಶಿಸಬಾರದು. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಸ್ಥಳೀಯ ಸಂಸ್ಥೆಗಳ ಮೂಲ ಸೌಕರ್ಯಕ್ಕೆ ೯೫ ಕೋಟಿ ರು. ಹಣ ಬಿಡುಗಡೆ ಮಾಡಿಸಲು ಸಿದ್ಧರಿದ್ದರೂ ಕ್ರಿಯಾಯೋಜನೆ ತಯಾರು ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದೇಕೆ? ಅಭಿವೃದ್ಧಿಗೆ ಬರುವಂತಹ ಆರ್ಥಿಕ ಸಂಪನ್ಮೂಲಕ್ಕೆ ಸಕಾಲದಲ್ಲಿ ಸ್ಪಂದನೆ ಸಿಗದಿದ್ದರೆ ಅಭಿವೃದ್ಧಿ ಸಾಧ್ಯವಾಗುವುದು ಹೇಗೆ?

- ಎಂ.ಎಲ್.ತುಳಸೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಜೆಡಿಎಸ್

ಅಧಿಕಾರಿಗಳ ವೈಫಲ್ಯ

ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಹೇಳಿ ನನಗೂ ಸಾಕಾಗಿದೆ. ಅವರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಉದಾಸೀನ ಧೋರಣೆ ತಳೆದಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ವಿಳಂಬ ಮಾಡಿದರೆ ಅದರಿಂದ ನಗರಸಭೆಗೆ ನಷ್ಟವಾಗಲಿದೆ. ಕೇಂದ್ರ ಸಚಿವರು ಆಸಕ್ತಿ ವಹಿಸಿ ಬಿಡುಗಡೆ ಮಾಡಿಸುತ್ತಿರುವ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲು ಉತ್ಸಾಹ ತೋರಬೇಕಿದೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಕ್ರಿಯಾಯೋಜನೆ ತಯಾರಿಸಿ ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸುತ್ತೇವೆ.

- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆ, ಮಂಡ್ಯ.

Share this article