ಹಾಸನ: ಹಾಸನಾಂಬೆ ಜಾತ್ರೋತ್ಸವದಲ್ಲಿ ಕಳೆದ ಒಂದು ದಿನದಿಂದ ಅನಾವಶ್ಯಕ ರಾಜಕೀಯ ಪ್ರಾರಂಭವಾಗಿರುವುದು ಬೇಸರದ ಸಂಗತಿ. ಈ ವೇಳೆ ಹಾಸನ ಶಾಸಕರಾದ ಮಾಡಿದ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಹೇಳಿಕೆ ನೀಡಿದ್ದಾರೆ. ಕುಟುಂಬ ಸಮೇತವಾಗಿ ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಅತ್ಯುತ್ತಮ ರೀತಿಯಲ್ಲಿ ಹಾಸನಾಂಬೆ ಉತ್ಸವದ ಸಿದ್ಧತೆ ಮಾಡಿದ್ದಾರೆ. ಯಾವುದೇ ಅನಾನುಕೂಲವಾಗದಂತೆ ಭಕ್ತರಿಗೆ ಅವಕಾಶ ಕಲ್ಪಿಸಿದ್ದಾರೆ. ನನಗೂ ೧೦೦ ಪಾಸ್ ನೀಡಿದ್ದರು. ಉಳಿದಂತೆ ನಾನು ಸ್ವತಃ ಎರಡು ಮೂರು ಲಕ್ಷ ರುಪಾಯಿ ಖರ್ಚು ಮಾಡಿ ಟಿಕೆಟ್‌ಗಳನ್ನು ಪಡೆಯುವ ವ್ಯವಸ್ಥೆ ಮಾಡಿಕೊಂಡೆ ಎಂದು ಹೇಳಿದರು.
ಯಾಕೋ ಅನಾವಶ್ಯಕ ರಾಜಕೀಯ ಶುರುವಾಗಿರುವುದು ವಿಷಾದನೀಯ. ನಮ್ಮ ಸ್ಥಳೀಯ ಶಾಸಕರು ಮಾಡಿದ ಪ್ರತಿಭಟನೆ ಸರಿಯಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬಂದಾಗ ಎಲ್ಲರೂ ಗೌರವದಿಂದ ವರ್ತಿಸಿದ್ದರು. ಯಾರಿಗೂ ಅಗೌರವ ತೋರಿಸಲಿಲ್ಲ. ಹಾಗಿದ್ದಾಗ ಇದೀಗ ಇಂಥ ಪ್ರತಿಭಟನೆ ನಡೆಸುವುದು ಸರಿಯಲ್ಲ. ಶಾಸಕ ಸ್ವರೂಪ್ ಪ್ರಕಾಶ್ ಏಕೆ ಹೀಗೆ ನಡೆದುಕೊಂಡರು ಗೊತ್ತಿಲ್ಲ. ರೇವಣ್ಣ ಅವರನ್ನು ಬಿಟ್ಟಿಲ್ಲ ಎನ್ನುವ ನೋವಿನಿಂದ ಹೀಗೆ ಮಾಡಿದ್ದಾರಾ ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ಸಚಿವ ಕೃಷ್ಣಬೈರೇಗೌಡ ಅವರು ಶ್ರದ್ಧೆಯಿಂದ ಉತ್ತಮ ಕೆಲಸ ಮಾಡಿದ್ದಾರೆ. ಅದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಹೇಳಿದ್ದಾರೆ. ರೇವಣ್ಣ ಅವರಿಗೆ ಬೇಸರ ಆಗಿದ್ದರೆ ಮತ್ತೆ ಅವರನ್ನು ಕರೆದು ವಿಶೇಷ ದರ್ಶನ ಮಾಡಿಸಲಿ. ವಿನಾಕಾರಣ ರಾಜಕೀಯ ಬೇಳೆ ಬೇಯಿಸಲು ಹೋಗಬೇಡಿ. ಹಾಸನಾಂಬೆ ಉತ್ಸವ ದೇವಿಯ ಭಕ್ತರ ನಂಬಿಕೆಯ ಹಬ್ಬ, ರಾಜಕೀಯ ವೇದಿಕೆ ಅಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು.