ರಾಜಧಾನಿಗೆ ಶರಾವತಿ ಒಯ್ಯಲು ಸ್ಥಳೀಯರ ವಿರೋಧ; ಸರ್ಕಾರದ ಗಮನಕ್ಕೆ ತರುವೆ: ಶಾಸಕ ಗೋಪಾಲಕೃಷ್ಣ

KannadaprabhaNewsNetwork |  
Published : Aug 31, 2024, 01:39 AM IST
ಶಾಸಕ ಗೋಪಾಲಕೃಷ್ಣ ಬೇಳೂರು. | Kannada Prabha

ಸಾರಾಂಶ

ಶರಾವತಿ ನದಿ ನೀರು ಕೃಷಿಗಾಗಿ ಬಳಕೆ ಮಾಡುತ್ತಿಲ್ಲ. ಕೇವಲ ವಿದ್ಯುತ್ ಉತ್ಪಾದನಾ ಉದ್ದೇಶಕ್ಕೆ ಬಳಕೆಯಾದ ನಂತರ ಉಳಿದ ನೀರನ್ನು ಕುಡಿಯುವ ನೀರಿಗೆ ಒಯ್ಯಲು ಚಿಂತನೆ ನಡೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಾಗರ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ರಾಜ್ಯ ಸರ್ಕಾರದ ಯೋಜನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು ಸಾರ್ವಜನಿಕರ, ಪರಿಸರವಾದಿಗಳ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕ್ಷೇತ್ರದ ಶಾಸಕನಾಗಿ ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ತಲುಪಿಸುವುದ ನನ್ನ ಜವಾಬ್ದಾರಿ. ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಜನಾಭಿಪ್ರಾಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸದ್ಯ ೧ ಕೋಟಿಗೂ ಹೆಚ್ಚು ಜನರು ವಾಸವಿದ್ದು, ಅವರ ಕುಡಿಯುವ ನೀರಿನ ಅಗತ್ಯ ಪೂರೈಕೆ ಮಾಡಲು ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವ ಚಿಂತನೆ ನಡೆಸಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಸಿ, ಸಾಗರ ಮತ್ತು ಹೊಸನಗರ ಭಾಗಕ್ಕೆ ದಿನದ ೨೪ಗಂಟೆ ವಿದ್ಯುತ್ ನೀಡಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯಲು ಚಿಂತನೆ ನಡೆಸಿ ಎಂದು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಶರಾವತಿ ಪಂಪ್ಡ್ ವಿದ್ಯುತ್ ಯೋಜನೆ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಗೇರುಸೊಪ್ಪ ಅಣೆಕಟ್ಟಿನಿಂದ ಮುಂದೆ ೪೦ ಸಾವಿರ ಕ್ಯೂಸೆಕ್ಸ್ ನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ಪುನರ್ ಬಳಕೆ ಮಾಡಿಕೊಂಡು ೨ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಸುಮಾರು ೮೨೦೦ ಕೋಟಿ ರು. ವೆಚ್ಚದಲ್ಲಿ ಯೋಜನೆ ಕಾರ್ಯಾರಂಭಗೊಳ್ಳಲಿದೆ. ಹಣ ಹೊಡೆಯುವ ಯೋಜನೆ ಎನ್ನುವ ಅಪಪ್ರಚಾರ ಕೈಬಿಟ್ಟು ಭವಿಷ್ಯದ ಬಗ್ಗೆ ಗಮನ ಹರಿಸಬೇಕು. ಶರಾವತಿ ನದಿ ನೀರು ಸಾಗರ ಪಟ್ಟಣಕ್ಕೆ ಬಳಕೆ ಮಾಡಿಕೊಳ್ಳುವ ಜೊತೆಗೆ ಸಾಗರ ಹೊಸನಗರ ಭಾಗದ ಗ್ರಾಮೀಣ ಪ್ರದೇಶಗಳಿಗೂ ಬಳಕೆ ಮಾಡಿಕೊಳ್ಳಲಾಗುತ್ತದೆ. ಬಿಜೆಪಿ ಅವಧಿಯಲ್ಲಿ ಇಂತಹ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಈಗ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಡಕೆ ಕೊಳೆರೋಗಕ್ಕೆ ಸಂಬಂಧಪಟ್ಟಂತೆ ಹೆಕ್ಟೇರಿಗೆ ಕನಿಷ್ಟ ೨೫ ಸಾವಿರ ರು. ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ. ಕಲ್ಮನೆ ಸೊಸೈಟಿಯಲ್ಲಿ ನಡೆದಿರುವ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಹಣ ಕಳೆದುಕೊಂಡವರು ಮನವಿ ಕೊಟ್ಟಿದ್ದಾರೆ. ಜನರ ಸಮಸ್ಯೆಯನ್ನು ರಾಜಕೀಯಗೊಳಿಸುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸೊಸೈಟಿಯನ್ನು ಸೂಪರ್ ಸೀಡ್ ಮಾಡುವ ಜೊತೆಗೆ ಹಣ ಪಾವತಿ ಮಾಡಿದವರಿಗೆ ಹಣ ವಾಪಾಸ್ ಕೊಡಿಸುವತ್ತ ಗಮನ ಹರಿಸಲಾಗುತ್ತದೆ. ಅತಿವೃಷ್ಟಿಯಿಂದ ಸುಮಾರು ೯೦ಕೋಟಿ ರು. ನಷ್ಟ ಸಂಭವಿಸಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಪೂರೈಕೆಗೆ ಚಿಂತನೆ

ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದ್ದರೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಯೋಚಿಸಿ ಈ ಯೋಜನೆಗೆ ಮುಂದಾಗಿದೆ. ಶರಾವತಿ ನದಿ ನೀರು ಕೃಷಿಗಾಗಿ ಬಳಕೆ ಮಾಡುತ್ತಿಲ್ಲ. ಕೇವಲ ವಿದ್ಯುತ್ ಉತ್ಪಾದನಾ ಉದ್ದೇಶಕ್ಕೆ ಬಳಕೆಯಾದ ನಂತರ ಉಳಿದ ನೀರನ್ನು ಕುಡಿಯುವ ನೀರಿಗೆ ಒಯ್ಯಲು ಚಿಂತನೆ ನಡೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ