ಕನ್ನಡಪ್ರಭ ವಾರ್ತೆ ಆಲೂರು
ವಾರದ ಸಂತೆ ಮತ್ತು ದಿನವಹಿ ಮಾರುಕಟ್ಟೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷೆ ತಾಹಿರಾ ಬೆಂಗಂ ಪ್ರತಿಭಟನಾಕಾರರಿಗೆ ಹೇಳಿದರು.ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯುವ ಸಂದರ್ಭದಲ್ಲಿ, ವಾರದ ಸಂತೆ ಮತ್ತು ದಿನವಹಿ ಮಾರುಕಟ್ಟೆಗೆ ಟೆಂಡರ್ ಕರೆಯುವ ಮುನ್ನ ಪ್ರಚಾರ ಮಾಡಿಲ್ಲವೆಂದು ಆರೋಪಿಸಿ, ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮರು ಟೆಂಡರ್ ಮಾಡುವಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಸದಸ್ಯರು ಚರ್ಚೆ ನಡೆಸಿ, ಆನ್‌ಲೈನ್ ಮೂಲಕ ಏಕಮಾತ್ರ ಟೆಂಡರ್ ಸ್ವೀಕೃತವಾಗಿರುವುದರಿಂದ ಅದನ್ನು ರದ್ದುಪಡಿಸಿ ಟೆಂಡರ್ ಮೊತ್ತವನ್ನು ಪರಿಷ್ಕರಣೆ ಮಾಡಿ ತಕ್ಷಣ ಮರು ಟೆಂಡರ್ ಕರೆಯಲು ತೀರ್ಮಾನಿಸಿದರು. ಸಭೆ ತೀರ್ಮಾನವನ್ನು ಅಧ್ಯಕ್ಷೆ ತಾಹೆರಾ ಬೇಗಂ ಮತ್ತು ಮುಖ್ಯಾಧಿಕಾರಿ ನಟರಾಜ್ ಪ್ರತಿಭಟನಾಕಾರರಿಗೆ ತಿಳಿಸಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಸಭೆ ಮುಂದುವರಿದು, ಒಳಚರಂಡಿ ರಾಜ್ಯ ನೀರು ಸಂಸ್ಕರಣಾ ಘಟಕದ ವತಿಯಿಂದ, ಪುರಸಭೆ ವ್ಯಾಪ್ತಿಯಲ್ಲಿರುವ ೫೦ ಗುಂಟೆ ಜಮೀನಿನಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಾಪಿಸಲು ಜಾಗವನ್ನು ಕೆ.ಯು.ಐ.ಡಿ.ಎಫ್.ಸಿ. ಇಲಾಖೆಗೆ ಹಸ್ತಾಂತರ ಮಾಡಬೇಕೆಂಬ ಸರ್ಕಾರದ ಸುತ್ತೋಲೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.ಪ್ರತಿವರ್ಷ ಸಂತೆ, ದಿನವಹಿ ಮಾರುಕಟ್ಟೆ ಹರಾಜು ಮಾಡುವ ಮುನ್ನ ಹ್ಯಾಂಡ್‌ಬಿಲ್ ಹಂಚುವುದು ಸೇರಿದಂತೆ ಆಟೋ ಮೂಲಕ ಪ್ರಚಾರ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಯಾರಿಗೂ ಗೊತ್ತಿಲ್ಲದ ಹಾಗೆ ಟೆಂಡರ್ ಪ್ರಕ್ರಿಯೆ ಮುಗಿದಿರುವುದರ ಹಿಂದೆ ಇರುವ ಕಾರಣವಾದರೂ ಏನು ಎಂದು, ಸದಸ್ಯರಾದ ತೌಫಿಕ್, ಖಾಲಿದ್, ಧರ್ಮ, ನಿಂಗರಾಜು, ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಇ-ಟೆಂಡರ್ ಕರೆದು ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಚಾರ ಮಾಡಲಾಗಿತ್ತು ಎಂದು ಮುಖ್ಯಾಧಿಕಾರಿ ನಟರಾಜ್ ಮಾಹಿತಿ ನೀಡಿದರು.ಪಂಚಾಯಿತಿ ಯಾವುದೇ ವಾರ್ಡುಗಳಲ್ಲಿ ಯಾವುದೆ ಕೆಲಸವಾಗಿಲ್ಲ. ಆದರೆ ೧೫ನೇ ಹಣಕಾಸು ಯೋಜನೆಯಲ್ಲಿ ಲಕ್ಷಾಂತರ ಬಿಲ್ ಪಾವತಿಯಾಗಿದೆ. ಸಭೆ ಗಮನಕ್ಕೆ ಬಾರದೆ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಯಾವುದೆ ಕೆಲಸವಾಗಬೇಕಾದರೂ ಸಭೆ ಗಮನಕ್ಕೆ ತರಬೇಕು ಎಂದು ಸದಸ್ಯರು ಆಗ್ರಹಿಸಿದರು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿಯಡಿ ಕಟ್ಟಡ, ನಿವೇಶನಗಳಿಗೆ ಚಾಲ್ತಿ ಸಾಲಿನ ಮಾರುಕಟ್ಟೆ ಬೆಲೆಗೆ ಕನಿಷ್ಠ ಶೇ. ೩ರಷ್ಟು ಹೆಚ್ಚಳ ಮಾಡಲು ಸರ್ಕಾರದ ನಿರ್ದೇಶನದಂತೆ ತೀರ್ಮಾನಿಸಲಾಯಿತು.
ವಾಣಿಜ್ಯ ಮಳಿಗೆ ಹರಾಜು ಇ-ಟೆಂಡರ್ ಆವಧಿ ಮಾ. ೨೪ಕ್ಕೆ ಅಂತಿಮ ದಿನವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪಾಳು ಬಿದ್ದ ಅಥವಾ ಅಪಾಯಕಾರಿಯಾದ ಕಟ್ಟಡಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಮಾಲೀಕರಿಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಬಾರ ಮುಖ್ಯಾಧಿಕಾರಿ ನಟರಾಜ್ ಮಾಹಿತಿ ನೀಡಿದರು.ಸಭೆ ಪ್ರಾರಂಭದಲ್ಲಿ ನೂತನವಾಗಿ ನೇಮಕಗೊಂಡ ನಾಮ ನಿರ್ದೇಶನ ಸದಸ್ಯರಾದ ಎ. ಜೆ. ಸಂದೇಶ್, ಖಾಲಿದ್‌ಪಾಷ ಮತ್ತು ಎ. ಎನ್. ಪ್ರವೀಣ್ ರವರನ್ನು ಸಭೆಗೆ ಸ್ವಾಗತಿಸಲಾಯಿತು. ನಗರ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದ ತೌಫಿಕ್ ರವರಿಗೆ ಬಿ-ಖಾತೆ ನೀಡಲಾಯಿತು.