ಹಾಸನದ ಕೆಎಐಡಿಬಿಯಲ್ಲಿ ಉದ್ಯಮಕ್ಕೆ ಸ್ಥಳೀಯರಿಂದ ಅಡ್ಡಿ: ಉದ್ಯಮದಾರರು, ಗ್ರಾಮಸ್ಥರ ನಡುವೆ ವಾಗ್ವಾದ

KannadaprabhaNewsNetwork |  
Published : Jun 21, 2024, 01:02 AM IST
20ಎಚ್ಎಸ್ಎನ್16 :  | Kannada Prabha

ಸಾರಾಂಶ

ಹಾಸನದ ಕೆಎಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಸ್ನೇಹಿ ಯೋಜನೆಯ ಫಲಾನುಭವಿಗಳಿಗೆ ಸ್ಥಳೀಯರಿಂದ ಅಡ್ಡಿಪಡಿಸಿದ ಆರೋಪ ವ್ಯಕ್ತವಾಗಿದ್ದು ಗುರುವಾರ ಉದ್ಯಮದಾರರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಉದ್ಯಮ ಸ್ನೇಹಿ ಯೋಜನೆಯಡಿ ದಲಿತ ಉದ್ಯಮದಾರರಿಗೆ ನಿವೇಶನ ಹಂಚಿಕೆ

ಕನ್ನಡಪ್ರಭ ವಾರ್ತೆ ಹಾಸನ

ಕೆಎಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಸ್ನೇಹಿ ಯೋಜನೆಯ ಫಲಾನುಭವಿಗಳಿಗೆ ಸ್ಥಳೀಯರಿಂದ ಅಡ್ಡಿಪಡಿಸಿದ ಆರೋಪ ವ್ಯಕ್ತವಾಗಿದ್ದು ಗುರುವಾರ ಉದ್ಯಮದಾರರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.

ದಲಿತ ಉದ್ಯಮದಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನಗರದ ಹೊರ ವಲಯದ ಕೌಶಿಕ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ದಲಿತ ಉದ್ಯಮದಾರರಿಗೆ ನೀಡಿದ್ದ ಜಾಗದಲ್ಲಿ ಉದ್ಯಮ ಆರಂಭ ಮಾಡಲು ಸ್ಥಳೀಯರು ಅಡ್ಡಿಪಡಿಸಿದ ಹಿನ್ನೆಲೆ ಪೊಲೀಸರ ಸಮ್ಮುಖದಲ್ಲಿ ಇಬ್ಬರ ನಡುವೆ ನಡೆದ ವಾಗ್ವಾದ ತಾರಕಕ್ಕೇರಿತು.

ಕೆಎಐಡಿಬಿ ಯಿಂದ ಎಸ್ಸಿ.ಎಸ್ಟಿ ಉದ್ಯಮದಾರರಿಗೆ ಮಂಜೂರು ಮಾಡಿಕೊಟ್ಟಿದ್ದ ಸ್ಥಳದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುದು ದಲಿತ ಉದ್ಯಮದಾರರ ಆರೋಪ. ಆದರೆ, ಗ್ರಾಮಕ್ಕೆ, ದನ, ಕರುಗಳಿಗೆ ಆಧಾರವಾಗಿರುವ ಗೋಮಾಳ ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂಬುದು ಸುತ್ತಮುತ್ತಲಿನ ಗ್ರಾಮದ ಜನರ ವಾದವಾಗಿದೆ.

ಇನ್ನು ಪೊಲೀಸರ ಸಮ್ಮುಖದಲ್ಲಿ ದಲಿತ ಉದ್ಯಮದಾರರು ಜೆಸಿಬಿ ಮೂಲಕ ಕೆಲಸ ಮಾಡಲು ಮುಂದಾದಾಗ ಸ್ಥಳೀಯರು ಅದನ್ನು ತಡೆದು, ಕೆಲಸ ಮಾಡಲು ಬಿಡದೆ ಅಡ್ಡಿಪಡಿಸಿದ್ದಾರೆ. ಬಳಿಕ ಪೋಲೀಸರ ಸಮ್ಮುಖದಲ್ಲಿ ಪ್ರಕರಣ ಠಾಣೆ ಮೆಟ್ಟಿಲೇರಿದ್ದು ಮುಂದೆ ಏನಾಗಲಿದೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಈ ವೇಳೆ ದಲಿತ ಉದ್ಯಮದಾರರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ‘2013-18 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ದಲಿತರನ್ನು ಉದ್ಯಮಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಉದ್ಯಮ ಸ್ನೇಹಿ ಎಂಬ ಕ್ರಾಂತಿಕಾರಿ ಯೋಜನೆ ಅಡಿಯಲ್ಲಿ ಉದ್ಯೋಗಿಯಾಗಿ ಉದ್ಯೋಗ ನೀಡು ಎಂಬ ಯೋಜನೆ ಜಾರಿಗೆ ತಂದು ಎಸ್ಸಿ.ಎಸ್ಟಿ ಸಮುದಾಯದ ಜನರಿಗೆ ಕೆಎಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ಮೀಸಲಾತಿ ನೀಡಿ, ಶೇಕಡ 50 ರಷ್ಟು ಸಬ್ಸಿಡಿ ನೀಡಿ ಜತೆಗೆ ಲೋನ್ ಮೂಲಕ ಹಣ ನೀಡಿ ಅವರನ್ನು ಆರ್ಥಿಕವಾಗಿ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಿದೆ’ ಎಂದು ಹೇಳಿದರು.

ಈ ಯೋಜನೆ ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಅನೇಕರು 2016-17 ರಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆ 2018ರಲ್ಲಿ ಹಾಸನ ಕೈಗಾರಿಕಾ ಪ್ರದೇಶದ ಉಪ ಬಡಾವಣೆ 4ರಲ್ಲಿ ಜಾಗ ಮಂಜೂರಾಗಿದೆ, ಜತೆಗೆ ಸದರಿ ಜಾಗಕ್ಕೆ ಸಂಪೂರ್ಣ ಹಣ ಪಾವತಿ ಮಾಡಿದ್ದರೂ ಸ್ಥಳೀಯರು ಅಡ್ಡಿ ಪಡಿಸುತ್ತಿರುವ ಹಿನ್ನೆಲೆ ಈ ವರೆಗೆ ಈ ಜಾಗದಲ್ಲಿ ಕೆಲಸ ಆರಂಭಿಸಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

‘ಈ ಹಿಂದೆ ಕೆಎಐಡಿಬಿ ಇಲಾಖೆ ಅಧಿಕಾರಿಗಳು ಕಾನೂನುಬದ್ದವಾಗಿ ಜಾಗವನ್ನು ನಮ್ಮ ಹೆಸರಿಗೆ ಮಂಜೂರು ಮಾಡಿ ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳಿಂದ ಲಕ್ಷಾಂತರ ರುಪಾಯಿ ಹಣವನ್ನು ಕೆಎಐಡಿಬಿಗೆ ಪಾವತಿಸಿ ಬಡ್ಡಿಯನ್ನು ಕಟ್ಟಲು ಆಗದೆ ಕಂಗಾಲಾಗಿದ್ದೇವೆ, ಕೂಡಲೇ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಸಮಸ್ಯೆ ಬಗೆ ಹರಿಸಬೇಕು’ ಎಂದು ಮನವಿ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ