ಮಹಾರಾಷ್ಟ್ರ ಸರ್ಕಾರದ ಸೇವಾ ಕೇಂದ್ರಗಳಿಗೆ ಬೀಗ

KannadaprabhaNewsNetwork | Updated : Jan 14 2024, 01:07 PM IST

ಸಾರಾಂಶ

ಮಹಾತ್ಮ ಫುಲೆ ಜನಾರೋಗ್ಯ ವಿಮೆ ಯೋಜನೆಯನ್ನು ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದ 865 ಹಳ್ಳಿ, ಪಟ್ಟಣಗಳಿಗೆ ವಿಸ್ತರಿಸಿ, ಬೆಳಗಾವಿಯಲ್ಲಿ ಆರಂಭಿಸಿದ ಸೇವಾ ಕೇಂದ್ರಗಳಿಗೆ ಬೀಗ ಜಡಿಯುವ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಜಿಲ್ಲಾಡಳಿತ ತಿರುಗೇಟು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾತ್ಮ ಫುಲೆ ಜನಾರೋಗ್ಯ ವಿಮೆ ಯೋಜನೆಯನ್ನು ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದ 865 ಹಳ್ಳಿ, ಪಟ್ಟಣಗಳಿಗೆ ವಿಸ್ತರಿಸಿ, ಬೆಳಗಾವಿಯಲ್ಲಿ ಆರಂಭಿಸಿದ ಸೇವಾ ಕೇಂದ್ರಗಳಿಗೆ ಬೀಗ ಜಡಿಯುವ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಜಿಲ್ಲಾಡಳಿತ ತಿರುಗೇಟು ನೀಡಿದೆ.

ತನ್ನ ರಾಜ್ಯವಲ್ಲದಿದ್ದರೂ ಮಹಾರಾಷ್ಟ್ರ ಸರ್ಕಾರ ಬೆಳಗಾವಿಗೂ ತನ್ನ ಆರೋಗ್ಯ ವಿಮೆ ಯೋಜನೆಯನ್ನು ವಿಸ್ತರಿಸಿತ್ತು. ಅಲ್ಲದೇ, ಮಹಾರಾಷ್ಟ್ರ ಮುಖ್ಯಮಂತ್ರಿ ವೈದ್ಯಕೀಯ ಸಹಾಯ ನಿಧಿಯನ್ನು ಕೂಡ ಕರ್ನಾಟಕ ಸರ್ಕಾರದ ಗಮನಕ್ಕೆ ತಾರದೇ ಮಂಜೂರು ಮಾಡಿತ್ತು. 

ಇದಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮೂಲಕ ತನ್ನ ಯೋಜನೆಯನ್ನು ಬೆಳಗಾವಿಗೆ ವಿಸ್ತರಿಸಿ, ಈ ಯೋಜನೆಗೆ ಅರ್ಜಿ ಸಲ್ಲಿಸಲು ನಗರದಲ್ಲಿ ನಾಲ್ಕು ಸೇವಾ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಇಷ್ಟು ಮಾತ್ರವಲ್ಲ, ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಇತ್ತೀಚೆಗಷ್ಟೇ ಬೆಳಗಾವಿಗೆ ಆಗಮಿಸಿ, ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಜತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮರಾಠಿಯ ಕೆಲವರಿಗೆ ಪರಿಹಾರ ಹಣವನ್ನು ಕೂಡ ಬಿಡುಗಡೆ ಮಾಡಿಸಿದ್ದರು.

ಮಹಾರಾಷ್ಟ್ರ ಸರ್ಕಾರದ ಈ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಕೂಡಲೇ ಬೆಳಗಾವಿಯಲ್ಲಿ ಆರಂಭಿಸಲಾದ ಸೇವಾ ಕೇಂದ್ರಗಳನ್ನು ಬಂದ್‌ ಮಾಡಬೇಕು. ಅಲ್ಲದೇ, ಈ ಯೋಜನೆ ಅನುಷ್ಠಾನಗೊಳಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ರಾಜ್ಯದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾಡಳಿತದ ಮೇಲೆ ತೀವ್ರ ಒತ್ತಡ ಹೇರಿದ್ದವು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿಗೊಳಿಸಲು ತೆರೆಯಲಾಗಿದ್ದ ನಾಲ್ಕು ಸೇವಾ ಕೇಂದ್ರಗಳಿಗೆ ನೋಟಿಸ್‌ ಜಾರಿ ಮಾಡಿದ್ದರು. ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ನೇತೃತ್ವದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಪೊಲೀಸರ ಸಮ್ಮುಖದಲ್ಲೇ ಅವುಗಳಿಗೆ ಬೀಗ ಜಡಿದರು.

Share this article