ಹಾವೇರಿ: ಕಬ್ಬು ಪೂರೈಕೆ ಮಾಡಿ ಎರಡು ತಿಂಗಳು ಕಳೆದರೂ ಹಣ ಪಾವತಿಸಿಲ್ಲ ಎಂದು ಆರೋಪಿಸಿ ತಾಲೂಕಿನ ಸಂಗೂರ ಜಿಎಂ ಶುಗರ್ಸ್ ಕಾರ್ಖಾನೆ ಗೇಟ್‌ಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು.
ಕಾರ್ಖಾನೆಗೆ ಕಬ್ಬು ಪೂರೈಸಿ ಎರಡು ತಿಂಗಳು ಗತಿಸಿದರೂ ರೈತರಿಗೆ ಹಣ ಕೊಟ್ಟಿಲ್ಲ. ಕಬ್ಬು ಪೂರೈಕೆ ಮಾಡಿ 14 ದಿನಗಳ ಒಳಗಾಗಿ ರೈತರಿಗೆ ಹಣ ಕೊಡಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ, ಕಾರ್ಖಾನೆಯವರು ಇದನ್ನು ಉಲ್ಲಂಘಿಸಿದ್ದಾರೆ. ಸುಮಾರು 1.20 ಲಕ್ಷ ಟನ್ ಕಬ್ಬು ಪೂರೈಕೆ ಮಾಡಲಾಗಿದ್ದು, ಅದರ ಮೊತ್ತ ಅಂದಾಜು ₹38 ಕೋಟಿ ಆಗುತ್ತದೆ. ಇದಕ್ಕೆ ಶೇ. 16ರಷ್ಟು ಬಡ್ಡಿ ಸೇರಿಸಿ ರೈತರಿಗೆ ಹಣ ಪಾವತಿಸಬೇಕು. ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ರೈತರಿಗೆ ಹಣ ಪಾವತಿಸುವುದು ಬಾಕಿಯಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೂ ಹಣ ಪಾವತಿಸದಿದ್ದರಿಂದ ಕಾರ್ಖಾನೆ ಮುಖ್ಯ ಗೇಟ್, ವೇಬ್ರಿಜ್ ಗೇಟ್, ಜಿಎಂ ಬ್ಯಾಂಕ್, ಆಡಳಿತ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ್ದೇವೆ ಎಂದು ರೈತರು ತಿಳಿಸಿದ್ದಾರೆ.ಒಂದು ವೇಳೆ ಸೋಮವಾರದೊಳಗಾಗಿ ಬಾಕಿ ಹಣ ನೀಡದಿದ್ದರೆ ಹಾನಗಲ್ ಹಾವೇರಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು. ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ನಿಂಗಪ್ಪ ನರೇಗಲ್, ಶಿವಯೋಗಿ ಹೂಗಾರ್, ಶಿವಲಿಂಗಪ್ಪ ಕಾಳಂಗಿ, ಗುರಪ್ಪ ಕರೆಗೊಂಡರ, ಬಸವರಾಜ್ ಮುಂದಿನಮನಿ, ಗುರನಂಜಪ್ಪ ವರ್ದಿ, ಮಲ್ಲೇಶಪ್ಪ ಭೀಮನಾಯಕರ, ಗುಡ್ಡನಗೌಡ ಮಲಾಗೌಡ್ರ, ಸುರೇಶ್ ಹೊಸಕೆರಿ, ಬಸಪ್ಪ ಕಳಸದ, ಹನುಮಂತ ಪಾಟೊಳಿ ಇತರರು ಇದ್ದರು.