ಬಳ್ಳಾರಿ: ಕನ್ನಡ ಸಾಹಿತ್ಯ- ಸಾಂಸ್ಕೃತಿಕ ಲೋಕದ ಸಾಕ್ಷಿ ಪ್ರಜ್ಞೆಯಂತಿರುವ ಲೋಹಿಯಾ ಚನ್ನಬಸವಣ್ಣ ಅವರ ಗುಣವಿಶೇಷ ಕೃತಿ "ಚುಂಬಕಗಾಳಿ " ನಗರದ ರಾಘವ ಕಲಾ ಮಂದಿರದಲ್ಲಿ ಮೇ 4ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಸಮಾಜಮುಖಿ ಮಾಸಪತ್ರಿಕೆಯ ಸಂಪಾದಕ, ಲೇಖಕ ಚಂದ್ರಕಾಂತ ವಡ್ಡು ಹಾಗೂ ಲೋಹಿಯಾ ಸಿ. ಚನ್ನಬಸವಣ್ಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ನಗರದ ವಿವಿಧ ಕಲಾವಿದರಿಂದ ಕನ್ನಡಗೀತೆಗಳ ಗಾಯನ ಕಾರ್ಯಕ್ರಮ ಇರಲಿದ್ದು, ನಾಡಿನ ಅನೇಕ ಭಾಗಗಳಿಂದ ಸಾಂಸ್ಕೃತಿಕ ಚಿಂತಕರು ಹಾಗೂ ಚನ್ನಬಸವಣ್ಣ ಅವರ ಅಭಿಮಾನಿಗಳು ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಲೋಹಿಯಾ ಚನ್ನಬಸವಣ್ಣ ಅವರ ಯುವ ಸ್ನೇಹಿತರ ಬಳಗ ತಿಳಿಸಿದೆ.
ಮೌಲ್ವಿಕ ಕೃತಿಗಳ ಪ್ರಕಟಣೆ: ಲೋಹಿಯಾ ಪ್ರಕಾಶನದ ಮೂಲಕ ಮೌಲ್ವಿಕ ಕೃತಿಗಳನ್ನು ಹೊರ ತಂದು ನಾಡಿನಾದ್ಯಂತ ವೈಚಾರಿಕ ಪ್ರಜ್ಞೆ ಮೂಡಿಸುವ ಕೆಲಸವನ್ನು ಅತ್ಯಂತ ಆಸ್ಥೆಯಿಂದ ನಿರ್ವಹಿಸಿದ ಹಾಗೂ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಇಂದಿನ ಯುವ ಪೀಳಿಗೆಗೆ ಮಾದರಿಯಂತಿರುವ ಚನ್ನಬಸವಣ್ಣ ಅವರು ಪ್ರಕಾಶನ ಮತ್ತು ಪುಸ್ತಕ ಮಾರಾಟವನ್ನು ಲಾಭದ ಸರಕಾಗಿ ಎಂದೂ ನೋಡಿದವರಲ್ಲ. ಸಾಹಿತ್ಯ ಸಂವಹನ ಕಾರ್ಯವನ್ನು ಹಲವು ದಶಕಗಳಿಂದ ನಿರ್ವಹಿಸುತ್ತಾ ಬಂದಿರುವ ಚನ್ನಬಸವಣ್ಣ ಅವರು ತಮ್ಮ ಜೀವನದ ಬಹುಭಾಗವನ್ನು ನುಡಿಸೇವೆಗೆ ಮುಡಿಪಿಟ್ಟವರು. ಅನೇಕ ಯುವ ಬರಹಗಾರರನ್ನು ಪ್ರೇರೇಪಿಸಿ ಕಥೆಗಳನ್ನು ಬರೆಸಿ, ಕಥಾಲೋಕಕ್ಕೆ ಪರಿಚಯಿಸಿಕೊಟ್ಟವರು. ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ "ಅಣ್ಣ " ಎಂದೇ ಸಂಬೋಧಿತ ಲೋಹಿಯಾ ಚನ್ನಬಸವಣ್ಣ ಅವರ ಒಡನಾಡಿ ಲೇಖಕರು ತಮ್ಮ ಅನುಭವಗಳನ್ನು ಕಟ್ಟಿಕೊಟ್ಟಿರುವ ಚುಂಬಕಗಾಳಿ ಕೃತಿಯಲ್ಲಿ ಚನ್ನಬಸವಣ್ಣ ಕುರಿತ ಅನೇಕ ಕೌತುಕ ಸಂಗತಿಗಳಿವೆ.ಬೆಂಗಳೂರಿನ ಸಮಾಜಮುಖಿ ಮಾಸಪತ್ರಿಕೆ ಹೊರ ತಂದಿರುವ ಕೃತಿ ಇಂದು ಬಳ್ಳಾರಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮ ಮತ್ತಷ್ಟು ಇಮ್ಮಡಿಗೊಳ್ಳುವಂತೆ ಮಾಡಿದೆ.