ಡಿ.9ರಂದು ಬೀದರ್‌ನಲ್ಲಿ ರಾಷ್ಟ್ರೀಯ ಲೋಕ ಅದಾಲತ್‌

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಗುರುವಾರ ಡಿ.9ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೀದರ್‌: ಬರುವ ಡಿ.9ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗುತ್ತಿದ್ದು ಇದರಲ್ಲಿ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್‌.ಕೆ ಕನಕಟ್ಟೆ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಗುರುವಾರ ಡಿ.9ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದು ಈ ವರ್ಷದ ಕೊನೆಯ ಲೋಕ ಅದಾಲತ್‌ ಆಗಿರುವುದರಿಂದ ಕಳೆದ ಲೋಕ ಅದಾಲತ್‌ಗಿಂತ ಈ ಸಲ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಇದ್ದು, ಪ್ರಸ್ತುತ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ, ಜೀವನಾಂಶ, ಚೆಕ್‌ ಬೌನ್ಸ್‌, ವಿದ್ಯುತ್‌ ಪ್ರಕರಣಗಳು, ಕಂದಾಯ ಅಪರಾಧಿಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣಗಳು. ಕಾರ್ಮಿಕರ ಪ್ರಕರಣಗಳು, ಬ್ಯಾಂಕ್‌ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ ಎಂದರು.

ಈ ಹಿಂದೆ ಸೆ.9ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯಾದ್ಯಂತ ಒಟ್ಟು 21,791 ಪ್ರಕರಣಗಳನ್ನು ಇತ್ಯರ್ಥಪಡಿಸಿ, 23,18,42,717 ರು.ಗಳನ್ನು ವಸೂಲಾತಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಬಾಕಿ ಪ್ರಕರಣಗಳು, ವ್ಯಾಜಪೂರ್ವ ಪ್ರಕಣಗಳು, ಬ್ಯಾಂಕ್‌ ವಸೂಲಾತಿ ಪ್ರಕರಣಗಳು, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳ ನೀರಿನ ತೆರಿಗೆ, ಬಿಎಸ್‌ಎನ್‌ಎಲ್‌ ಹಾಗೂ ಜೆಸ್ಕಾಂ ಬಾಕಿ ಬಿಲ್ಲುಗಳ ಪ್ರಕರಣಗಳು ಸೇರಿವೆ ಎಂದರು.

2023ರ 1ನೇ ಜನವರಿಯಿಂದ ಜಿಲ್ಲೆಯಲ್ಲಿ ಒಟ್ಟು 27,424 ಪ್ರಕರಣಗಳು ಬಾಕಿ:

1ನೇ ಜನವರಿ 2023 ಪ್ರಕಾರ ನಮ್ಮ ಜಿಲ್ಲೆಯಲ್ಲಿ ಒಟ್ಟು 27,424 ಪ್ರಕರಣಗಳು ಬಾಕಿ ಇದ್ದು. ಇವುಗಳಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೆ, ಕೆಎಸ್‌ಆರ್‌ಟಿಸಿ, ನಗರಸಭೆ, ಜಿಲ್ಲಾ ಪಂಚಾಯತ್‌, ಪೊಲೀಸ್‌, ಬ್ಯಾಂಕ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು.

ರಾಜಿ ಆಗಿ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದಬಹುದು:

ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಲಯ ಶುಲ್ಕ ವಾಪಸ್‌ ಸಿಗಲಿದ್ದು ಇಲ್ಲಿ ಇಬ್ಬರೂ ಪಕ್ಷಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಜಿ. ಸುರೇಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ, ರಾಹುಲ್‌ ರೋಷನ, ಜೀವನ, ಯೋಹಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article