ಬ್ಯಾಡಗಿ: ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆ ನಿರ್ಣಾಯಕವಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಶೀರ್ವದಿಸಿದಂತೆ ಪ್ರಸಕ್ತ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸುವ ಮೂಲಕ ರಾಹುಲ್ ಗಾಂಧಿ ಅವರ ಕೈಬಲಪಡಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಅಲ್ಪಸಂಖ್ಯಾತ ಸಮುದಾಯಕ್ಕೆ ಕರೆ ನೀಡಿದರು.
ಪಟ್ಟಣದ ಸಂಗಮೇಶ್ವರ ನಗರದಲ್ಲಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯದಡಿ ದೇಶದ ಬಡ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸುತ್ತಾ ಬಂದಿದೆ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.ಅಲ್ಪ ಸಂಖ್ಯಾತ ಸಮುದಾಯದೊಂದಿಗೆ ಕಾಂಗ್ರೆಸ್ ಉತ್ತಮ ಬಾಂಧವ್ಯ ಹೊಂದಿದೆ. ಹೀಗಾಗಿ ಈ ಸಮುದಾಯದ ಜನರು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ. ಅದಾಗ್ಯೂ ವಿವಿಧ ಆಮಿಷಗಳಿಗೆ ತಮ್ಮ ನಿರ್ಧಾರವನ್ನು ಬದಲಿಸುವಂತಹ ಜನರಿರುತ್ತಾರೆ, ಅವರ ಬಗ್ಗೆ ಎಚ್ಚರವಿರಲಿ ಎಂದರು.ರಾಜ್ಯದಂತೆ ದೇಶದಲ್ಲೂ ಗ್ಯಾರಂಟಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದೇ ಆದಲ್ಲಿ ರಾಜ್ಯದ ಬಡವರಿಗೆ ಉಚಿತ ಗ್ಯಾರಂಟಿಗಳನ್ನು ನೀಡಿದಂತೆ ದೇಶವ್ಯಾಪಿಯೂ ನೀಡಲಾಗುವುದು. ಪ್ರತಿ ವರ್ಷಕ್ಕೆ ಪ್ರತಿ ಕುಟುಂಬಕ್ಕೆ ₹1 ಲಕ್ಷ ಹಣ, ರೈತರ ಸಾಲಮನ್ನಾ ಇನ್ನಿತರ ಗ್ಯಾರಂಟಿಗಳನ್ನು ನೀಡುವುದಾಗಿ ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ನುಡಿದಂತೆ ನಡೆಯಲಿದ್ದೇವೆ ಎಂದರು.
ಬೊಮ್ಮಾಯಿ ಕೊಡುಗೆ ಶೂನ್ಯ: ಸಿದ್ಧರಾಮಯ್ಯ ಮೈಸೂರು, ಯಡಿಯೂರಪ್ಪ ಶಿವಮೊಗ್ಗ ಅಭಿವೃದ್ಧಿಪಡಿಸಿದಂತೆ ಬಸವರಾಜ ಬೊಮ್ಮಾಯಿ ಹಾವೇರಿಯನ್ನು ಅಭಿವೃದ್ಧಿಪಡಿಸಿದ್ದಾರೆಯೇ ಎಂದು ಪ್ರಶ್ನಿಸಿದ ಶಿವಣ್ಣನವರ, ಬೊಮ್ಮಾಯಿ ಸಾಧನೆ ಶೂನ್ಯ, ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.ದೇಶದ 524 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸುತ್ತಿರುವ ಬಿಜೆಪಿಗೆ ನೈತಿಕವಾಗಿ ಜನರ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಳಿಸಿಕೊಳ್ಳಲು ಅಲ್ಪಸಂಖ್ಯಾತ ಸಮುದಾಯದವರು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ರಾಜಣ್ಣ ಕಳ್ಯಾಳ, ಡಾ. ಎ.ಎಂ. ಸೌದಾಗರ, ಮುನಾಫ್ ಎರೇಶಿಮಿ, ಮುಕ್ತಿಯಾರ ಅಹ್ಮದ್ ಮುಲ್ಲಾ, ನಜೀರ್‌ಅಹ್ಮದ್ ಶೇಖ್, ಮಂಜೂರ ಹಕೀಮ್, ರಾಜಾಭಕ್ಷ ಕೂರಗುಂದ, ಖಾದರಸಾಬ್ ದೊಡ್ಮನಿ, ಮಹ್ಮದ್ ರಫೀಕ್ ಮದ್ಗಲ್, ಮಜೀದ್ ಮುಲ್ಲಾ, ಅಬ್ದುಲ್ ಸಮ್ಮದ್ ಬೆಳವಿಗಿ, ನವೀದ್ ಶಿಡೇನೂರ ಹಾಗೂ ಇನ್ನಿತರರಿದ್ದರು.