ಲೋಕ ಚುನಾವಣೆ: ಕೋಲಾರ ನಾಯಕರ ಜತೆ ಎಚ್ಡಿಕೆ ಚರ್ಚೆ

KannadaprabhaNewsNetwork |  
Published : Feb 04, 2024, 01:41 AM IST
ಬಿಡದಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಡೆದ ಸಭೆ. | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದರು.

ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸಭೆ ನಡೆಸಿ ಲೋಕಸಭಾ ಕ್ಷೇತ್ರದ ಪರಿಸ್ಥಿತಿ, ಪಕ್ಷದ ಸಂಘಟನೆ, ಸಿದ್ಧತೆ, ಅಭ್ಯರ್ಥಿ ಇತ್ಯಾದಿ ಅಂಶಗಳ ಬಗ್ಗೆ ನಾಯಕರಿಂದ ಮಾಹಿತಿ ಪಡೆದುಕೊಂಡರು.

ಕೋಲಾರ ಕ್ಷೇತ್ರದಲ್ಲಿ ಮೂವರು ಶಾಸಕರಿದ್ದು, ಕಳೆದ ವಿಧಾನಸಭೆಯಲ್ಲಿ ನಿರೀಕ್ಷೆಗೂ ಮೀರಿ ಮತಗಳನ್ನು ಜೆಡಿಎಸ್ ಗಳಿಸಿದೆ. ಹೀಗಾಗಿ ನಮ್ಮ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಿ ಪಕ್ಷದ ನಿಷ್ಠಾವಂತ ದಲಿತ ನಾಯಕರೊಬ್ಬರನ್ನು ಗೆಲ್ಲಿಸಿಕೊಳ್ಳಬಹುದು ಎಂದು ಮುಖಂಡರು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.

ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್ ಅವರೊಂದಿಗೆ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷ ಹಾಗೂ ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮೇಲೂರು ರವಿ, ಮಾಜಿ ಉಪ ಸಭಾಪತಿ ಕೆ.ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿ ಚೌಡರೆಡ್ಡಿ ತೂಪಲ್ಲಿ, ಮಾಲೂರಿನ ರಾಮೇಗೌಡ, ಬಂಗಾರಪೇಟೆಯ ಮಲ್ಲೇಶ್ ಬಾಬು, ಕೋಲಾರದ ಸಿಎಂಆರ್ ಶ್ರೀನಾಥ್‌ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಹಾಜರಿದ್ದು, ತಮ್ಮ ಅಭಿಪ್ರಾಯಗಳನ್ನು ಕುಮಾರಸ್ವಾಮಿ ಅವರಿಗೆ ತಿಳಿಸಿದರು.ಸಭೆಯಲ್ಲಿ ಮೂಡಿಬಂದ ಸಲಹೆಗಳನ್ನು ಆಲಿಸಿದ ಮಾಜಿ ಮುಖ್ಯಮಂತ್ರಿಗಳು ಕೋಲಾರ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಜೆಡಿಎಸ್ ಈಗ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿರುವ ಕಾರಣ ಇನ್ನೂ ಅನುಕೂಲಕರ ವಾತಾವರಣ ಇದೆ. ಕ್ಷೇತ್ರದ ಎಲ್ಲಾ ಸ್ಥಿತಿಗತಿಗಳನ್ನು ನಾನು ಕ್ಷೇತ್ರ ಹಂಚಿಕೆ ಚರ್ಚೆ ಸಂದರ್ಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ನಾಯಕರ ಜತೆ ಚರ್ಚೆ ಮಾಡುತ್ತೇನೆ ಎಂದು ಮುಖಂಡರಿಗೆ ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಗೊಂದಲ ಇಲ್ಲ. ಪರಸ್ಪರ ಹೊಂದಾಣಿಕೆ ಹಾಗೂ ಸಹಮತ ಭಾವದ ವಾತಾವರಣ ಇದೆ ಎಂದು ಮುಖಂಡರು ಮಾಜಿ ಮುಖ್ಯಮಂತ್ರಿ ಗಮನಕ್ಕೆ ತಂದರು.

ಮೈತ್ರಿ ಧರ್ಮ ಪಾಲಿಸಬೇಕು ಹಾಗೂ ಪ್ರಧಾನಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಬೇಕು ಎಂದ ಅವರು, ಕ್ಷೇತ್ರದಲ್ಲಿ ಆಗಬೇಕಿರುವ ಪಕ್ಷದ ಕೆಲಸ, ಸಂಘಟನೆ ಬಗ್ಗೆ ಮುಖಂಡರಿಗೆ ಕೆಲ ಸಲಹೆ, ಸೂಚನೆಗಳನ್ನೂ ನೀಡಿದರು. ಈ ವೇಳೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!