ಚನ್ನಪಟ್ಟಣ: ಪಟ್ಟಣದ ವಿವೇಕಾನಂದ ನಗರದಲ್ಲಿರುವ ಮಂಡ್ಯದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಎಂಜಿನಿಯರ್ ಶಶಿಕುಮಾರ್ ಅವರ ಮಾವನ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಶಶಿಕುಮಾರ್ ಮಾವ ರಾಮಲಿಂಗಯ್ಯ ಅವರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶೋಧಿಸಿದರು. ಶಶಿಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಇನ್‌ಸ್ಪೆಕ್ಟರ್ ಕೃಷ್ಣಯ್ಯ ನೇತೃತ್ವದ ತಂಡ ಶಶಿಕುಮಾರ್ ಮಾವ ರಾಮಲಿಂಗಯ್ಯ ಮನೆ ಮೇಲೆ ದಾಳಿ ನಡೆಸಿತು. ಮನೆಯಲ್ಲಿದ್ದ ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡ, ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ. ಈ ವೇಳೆ ಕೆಲ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಶಶಿಕುಮಾರ್ ಅವರು ಮದ್ದೂರು ತಾಲೂಕಿನ ಬೆಳ್ಳೂರು ಗ್ರಾಮದವರಾಗಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ.