- “ಮನೆ ಮನೆಗಳಲ್ಲಿ ವೇದ ಪಾರಾಯಣ” ಎಂಬ ಹೊಸ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ
ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಬಿ.ಎಚ್. ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಫೆ.21ರಿಂದ 28ರವರೆಗೆ ಲೋಕಕಲ್ಯಾಣಾರ್ಥ ಶ್ರೀ ಶಾಕಲ ಋಕ್ಸಂಹಿತಾ ಯಾಗವನ್ನು ಏರ್ಪಡಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ 4 ವೇದಗಳ ಸಂಹಿತಾ ಯಾಗವನ್ನು ಎರಡು ಆವೃತ್ತಿಗಳಲ್ಲಿ ಪೂರೈಸಲಾಗಿದೆ ಎಂದರು.ಈ ವರ್ಷ ಆಚರಿಸಲಿರುವ ಶಾಕಲ ಋಕ್ಸಂಹಿತಾ ಯಾಗಕ್ಕೆ ಪೂರ್ವಭಾವಿಯಾಗಿ “ಮನೆ ಮನೆಗಳಲ್ಲಿ ವೇದ ಪಾರಾಯಣ” ಎಂಬ ಹೊಸ ಪರಿಕಲ್ಪನೆಯೊಂದಿಗೆ 123 ಮನೆಗಳಲ್ಲಿ ಋಗ್ವದ ಸಂಹಿತಾ ಪಾರಾಯಣವನ್ನು ಮಾಡಿಸಲಾಗಿದೆ. ಫೆ.21ರಂದು ಬೆಳಗ್ಗೆ 7ಕ್ಕೆ ಪೂಜಾ ಕಾರ್ಯಕ್ರಮಗಳೊಂದಿಗೆ ಯಾಗ ಆರಂಭವಾಗಲಿದೆ. ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಇರುತ್ತದೆ ಎಂದರು.
ಫೆ.28ರಂದು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಕಲ ಋಕ್ಸಂಹಿತಾ ಯಾಗದ ಮಹಾ ಪೂರ್ಣಾಹುತಿ ನಡೆಯಲಿದೆ ಮತ್ತು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ನಿಸ್ವಾರ್ಥ ಸೇವೆ ಮಹನೀಯರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಕೆ. ವೆಂಕಟೇಶ್‍ಮೂರ್ತಿ, ಶಂಕರ ನಾರಾಯಣ, ಸೂರ್ಯನಾರಾಯಣ ರಾವ್, ಕೇಶವಮೂರ್ತಿ, ಡಾ.ನಾಗಮಣಿ, ಸರಳ, ಡಾ.ರವಿಕಿರಣ್, ಕುಮಾರ ಶಾಸ್ತ್ರಿ ಉಪಸ್ಥಿತರಿದ್ದರು.
- - - -(ಸಾಂದರ್ಭಿಕ ಚಿತ್ರ: ಯಾಗ.ಜೆಪಿಜಿ)