ವರಸುದಾರರಿಲ್ಲದ ಲೋಕಾಪುರ ಪಟ್ಟಣ ಪಂಚಾಯಿತಿ!

KannadaprabhaNewsNetwork | Published : Apr 30, 2025 12:30 AM

ಸಾರಾಂಶ

ಲೋಕಾಪುರ ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದ್ದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೇಗೇರಿ ನಾಲ್ಕು ವರ್ಷಗಳೂ ಕಳೆದರೂ ಚುನಾವಣೆ ನಡೆಯದಿರುವುದರಿಂದ ಸಾರ್ವಜನಿಕರ ಸಮಸ್ಯೆ ಕೇಳುವವರಿಲ್ಲದೆ ನಾಗರಿಕರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದ್ದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೇಗೇರಿ ನಾಲ್ಕು ವರ್ಷಗಳೂ ಕಳೆದರೂ ಚುನಾವಣೆ ನಡೆಯದಿರುವುದರಿಂದ ಸಾರ್ವಜನಿಕರ ಸಮಸ್ಯೆ ಕೇಳುವವರಿಲ್ಲದೆ ನಾಗರಿಕರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.

ಬೆಳಗಲಿ, ಕೆರೂರ, ಕಮತಗಿ ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದು ನೂತನ ಸದಸ್ಯರು ಅಧಿಕಾರ ಹಿಡಿದಿದ್ದಾರೆ, ಆದರೆ ಲೋಕಾಪುರ ಪಟ್ಟಣ ಪಂಚಾಯಿತಿ ಚುನಾವಣೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ನಾಯಕರ ಇಚ್ಛಾಸಕ್ತಿ ಕೊರತೆ ಕಂಡು ಬರುತ್ತಿದೆ.

ಪಟ್ಟಣ ಪಂಚಾಯಿತಿಯನ್ನು ಮೇಲ್ದಜೇಗೇರಿಸಬೇಕು ಎಂದು ನಾಲ್ಕು ವರ್ಷಗಳ ಹಿಂದೆ ಸ್ಥಳೀಯ ಸಂಘಟನೆಗಳು, ಸ್ಥಳೀಯ ಮುಖಂಡರು ಸಾರ್ವಜನಿಕರ ಒತ್ತಾಯ ಪರಿಣಾಮ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮುತುವರ್ಜಿ ವಹಿಸಿ ಪಟ್ಟಣ ಪಂಚಾಯಿತಿ ಮೇಲ್ದರ್ಜೇಗೇರಿಸಲಾಗಿತ್ತು. ಆದರೆ, ಚುನಾವಣೆ ನಡೆಯದ ಕಾರಣ ಹೆಸರಿಗೆ ಮಾತ್ರ ಪಟ್ಟಣ ಪಂಚಾಯಿತಿ ಎಂದು ಕರೆಯಲಾಗುತ್ತಿದೆ.

ಜನರ ಸಮಸ್ಯೆ ಆಲಿಸಬೇಕಾದ ಜನಪ್ರತಿನಿಧಿಗಳಿಲ್ಲದೆ ಲೋಕಾಪುರ ಪಟ್ಟಣ ಪಂಚಾಯಿತಿ ಅನಾಥವಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ಪಟ್ಟಣ ಪಂಚಾಯಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಪಟ್ಟಣದಲ್ಲಿ ರಸ್ತೆ, ಚರಂಡಿ ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು, ಪಹಣಿ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲ.

ಕಳೆದ ನಾಲ್ಕು ವರ್ಷಗಳ ಹಿಂದೆ, ಅಂದರೆ ೩೧ ಡಿಸೆಂಬರ್ ೨೦೨೦ ರಂದು ಲೋಕಾಪುರ ಅಭಿವೃದ್ಧಿ ಹಿತದೃಷ್ಟಿಯಿಂದ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜಿಗೇರಿಸಲಾಗಿತ್ತು. ವಾರ್ಡಗಳ ನಿಗದಿ ಆಗಿದ್ದು ಬಿಟ್ಟರೆ, ವಿಂಗಡನೆ, ಮೀಸಲಾತಿ, ಮತದಾರರ ಪಟ್ಟಿ ಸಿದ್ಧತೆ ಸೇರಿ ಯಾವುದೇ ಪ್ರಕ್ರಿಯೆ ನಡೆದಿಲ್ಲ.ಅಭಿವೃದ್ಧಿ ದೃಷ್ಟಿಯಿಂದ ಹಿಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜಿಗೆ ಏರಿಸಿದ್ದರು. ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದರೂ ಚುನಾವಣೆ ಬಗ್ಗೆ ಗಮನ ಹರಿಸುತ್ತಿಲ್ಲ, ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣ ಪಂಚಾಯತಿ ಚುನಾವಣೆಯನ್ನು ಘೋಷಣೆ ಮಾಡಬೇಕು.

ಲೋಕಣ್ಣ ಭೀ ಕತ್ತಿ ಗ್ರಾಪಂ ಮಾಜಿ ಅಧ್ಯಕ್ಷರು, ಲೋಕಾಪುರ ಲೋಕಾಪುರ ಪಟ್ಟಣ ಪಂಚಾಯತಿ ಚುನಾವಣೆ ಬಗ್ಗೆ ಸರಕಾರಕ್ಕೆ ವರದಿ ಕಳಿಸಲಾಗಿದೆ. ಸರಕಾರದ ಆದೇಶ ಬಂದ ನಂತರ ಚುನಾವಣೆ ಪ್ರಕ್ರಿಯೆಗೆ ಕ್ರಮ ವಹಿಸಲಾಗುವುದು.

- ಬಿ.ವೈ. ಸುರಕೋಡ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಬಾಗಲಕೋಟೆ

Share this article