ಪಿಡಬ್ಲ್ಯುಡಿ ಇಇ ಹರ್ಷ ಮನೆ ಮೇಲೆ ಲೋಕಾಯುಕ್ತ ದಾಳಿ...!

KannadaprabhaNewsNetwork | Published : Feb 1, 2024 2:02 AM

ಸಾರಾಂಶ

ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಮೇರೆಗೆ ಲೋಕೋಪಯೋಗಿ ಇಲಾಖೆ ಇಲಾಖೆ ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಹರ್ಷ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಿತ್ಯವೂ ಬೆಂಗಳೂರಿನಿಂದ ಮಂಡ್ಯಕ್ಕೆ ಕರ್ತವ್ಯಕ್ಕೆ ಬಂದು ಹೋಗುತ್ತಿದ್ದ ಹರ್ಷ. ತುರ್ತು ಸಂದರ್ಭದಲ್ಲಿ ಮಂಡ್ಯದ ತಂದೆ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಮಂಡ್ಯದ ಮನೆಯಲ್ಲಿ ಹಲವು ದಾಖಲೆಗಳು ಪತ್ತೆ.

ಕನ್ನಡಪ್ರಭ ವಾರ್ತೆ ಮಂಡ್ಯ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಮೇರೆಗೆ ಲೋಕೋಪಯೋಗಿ ಇಲಾಖೆ ಇಲಾಖೆ ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಹರ್ಷ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಮನೆ, ಲೋಕೋಪಯೋಗಿ ಇಲಾಖೆ ಕಚೇರಿ, ಸರ್ಕಾರಿ ವಸತಿ ಗೃಹ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮನೆ, ಮಾವನ ಮನೆ, ನಾಗಮಂಗಲದಲ್ಲಿರೋ ಫಾರ್ಮ್ ಹೌಸ್ ಸೇರಿ ಆರು ಕಡೆ ದಾಳಿ ನಡೆಸಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸಜೀತ್ ನೇತೃತ್ವದಲ್ಲಿ ದಾಳಿ, ದಾಖಲೆಗಳ ಪರಿಶೀಲನೆ ನಡೆಸಿದರು.

ಮಂಡ್ಯ ನಗರದಲ್ಲೇ ಹರ್ಷರವರ ಕಚೇರಿ, ಸರ್ಕಾರಿ ವಸತಿ ಗೃಹ. ಕಲ್ಲಹಳ್ಳಿಯಲ್ಲಿರುವ ತಂದೆ ನಿವಾಸ ಹಾಗೂ ನಾಗಮಂಗಲದಲ್ಲಿರುವ ಮಾವ ಹಾಗೂ ನಾಗಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಅವರ ಮನೆಯ ಮೇಲೂ ದಾಳಿ ನಡೆಸಿದರು.

ಹರ್ಷ ಅವರ ಹುಟ್ಟೂರು ಹುಲಿವಾನದಲ್ಲಿರುವ ತಂದೆ ಮನೆ, ಸಂಬಂಧಿಕರ ಮನೆಗಳಿಗೂ ಲಗ್ಗೆ ಹಾಕಿದ ಪೊಲೀಸರು ಅಕ್ರಮ ಆಸ್ತಿ ಸಂಪಾದನೆಯ ದಾಖಲೆ, ಸಂಪತ್ತಿಗಾಗಿ ಹುಡುಕಾಡಿದರು. ಮಂಡ್ಯ ಮಾತ್ರವಲ್ಲದೇ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಹರ್ಷ ಮನೆಗೂ ತೆರಳಿ ತಪಾಸಣೆ ಮಾಡಿದರು.

ನಿತ್ಯವೂ ಬೆಂಗಳೂರಿನಿಂದ ಮಂಡ್ಯಕ್ಕೆ ಕರ್ತವ್ಯಕ್ಕೆ ಬಂದು ಹೋಗುತ್ತಿದ್ದ ಹರ್ಷ. ತುರ್ತು ಸಂದರ್ಭದಲ್ಲಿ ಮಂಡ್ಯದ ತಂದೆ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಮಂಡ್ಯದ ಮನೆಯಲ್ಲಿ ಹಲವು ದಾಖಲೆಗಳು ಪತ್ತೆ.

ಲಕ್ಷಾಂತರ ಮೌಲ್ಯದ ಐಷಾರಾಮಿ ಏರೋಬಿಕ್ಸ್, ಜಿಮ್ ಯಂತ್ರ, 6 ಲಕ್ಷ ಮೌಲ್ಯದ ಒಂದು ಕಾರು, ಒಂದೂವರೆ ಲಕ್ಷದ ಎಲೆಕ್ಟ್ರಿಕ್ ಬೈಕ್ ಪತ್ತೆಯಾಗಿದೆ. ಲೋಕಾಯುಕ್ತ ಪೊಲೀಸರ ತಪಾಸಣೆ ರಾತ್ರಿಯಾದರೂ ಮುಂದುವರೆದಿತ್ತು.

ಮಂಡ್ಯ ಲೋಕಾಯುಕ್ತ ಎಸ್ಪಿ ಸಜಿತ್, ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಸುಧೀರ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು.ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆ

ನಾಗಮಂಗಲದಲ್ಲಿರುವ ಹರ್ಷ ಅವರ ಮಾವ ಎಚ್‌.ಟಿ. ಕೃಷ್ಣೇಗೌಡರ ಮನೆಯಲ್ಲಿ ದಾಖಲೆ ಇಲ್ಲದ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ. 350 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, 1.5 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ 20 ವಿದೇಶಿ ಕರೆನ್ಸಿ ನೋಟು ಪತ್ತೆಯಾಗಿವೆ.

Share this article