ಬೆಂಗಳೂರು : ಕೆ.ಸಿ.ಜನರಲ್‌ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಲೋಕಾಯುಕ್ತರ ತಂಡ ಕೆಂಡಾಮಂಡಲ

KannadaprabhaNewsNetwork |  
Published : Nov 30, 2024, 01:34 AM ISTUpdated : Nov 30, 2024, 10:07 AM IST
KCG 6 | Kannada Prabha

ಸಾರಾಂಶ

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಿಢೀರ್‌ ಭೇಟಿದ ಲೋಕಾಯುಕ್ತರ ತಂಡವು ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾಗಿದ್ದು, ‘ಆಸ್ಪತ್ರೆಯೋ ಅಥವಾ ಹಾಳು ಕೊಂಪೆಯೋ’ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

 ಬೆಂಗಳೂರು : ನಗರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ  ಲೋಕಾಯುಕ್ತರ ತಂಡವು ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾಗಿದ್ದು, ‘ಆಸ್ಪತ್ರೆಯೋ ಅಥವಾ ಹಾಳು ಕೊಂಪೆಯೋ’ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಶುಕ್ರವಾರ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌, ಉಪಲೋಕಾಯುಕ್ತರಾದ ನ್ಯಾ.ಕೆ.ಎನ್​.ಫಣೀಂದ್ರ ಮತ್ತು ನ್ಯಾ. ಬಿ.ವೀರಪ್ಪ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದರು. ಕೆಸಿ ಜನರಲ್ ಆಸ್ಪತ್ರೆಯ ಬಗ್ಗೆ ಸರಣಿ ದೂರುಗಳು ಕೇಳಿಬಂದ ಕಾರಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೋಗಿಗಳ ಸಂಬಂಧಿಕರಿಂದ ಅಹವಾಲು ಆಲಿಸಿದರು. ಅಲ್ಲದೇ, ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು. ರೋಗಿಗಳಿಂದ ದುಡ್ಡು ಸುಲಿಗೆ ಮಾಡುತ್ತಿರುವ ವಿಚಾರ ತಿಳಿದು ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ರೋಗಿಗಳ ಬಗ್ಗೆ ಮತ್ತು ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ಲೋಕಾಯುಕ್ತರ ಮುಂದೆ ರೋಗಿಗಳ ಕುಟುಂಬಸ್ಥರು ತಮ್ಮ ನೋವು ತೋಡಿಕೊಂಡರು. ₹100-200 ತೆಗೆದುಕೊಳ್ಳುವುದಿಲ್ಲ, ₹500 ಕೊಡಲೇಬೇಕು. ಇಲ್ಲದಿದ್ದರೆ ಗುರುತಿನ ಚೀಟಿಗಳನ್ನು ಎತ್ತಿಟ್ಟುಕೊಳ್ಳುತ್ತಾರೆ ಎಂದು ದೂರು ನೀಡಿದರು. ಹಲವು ವಿಭಾಗಗಳಿಗೆ ಭೇಟಿ ನೀಡಿದ ವೇಳೆ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದಿರುವುದು, ರೋಗಿಗಳಿಗೆ ಚಿಕಿತ್ಸೆ ಸಿಗದಿರುವುದು, ಔಷಧಿಗಳ ಕೊರತೆ ಇರುವುದು ಸೇರಿ ಹಲವು ಲೋಪದೋಷಗಳನ್ನು ಪತ್ತೆ ಹಚ್ಚಲಾಯಿತು.

ಒಂದು ಹಂತಕ್ಕೆ ಆಸ್ಪತ್ರೆಯಲ್ಲ ಭೂತಬಂಗಲೆ ರೀತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಹೊರಗಡೆಯಿಂದ ಔಷಧ ತರಲು ರೋಗಿಗಳಿಗೆ ಸೂಚಿಸಿದಂತೆ ವೈದ್ಯರಿಗೆ ತಾಕೀತು ಮಾಡಿದರು. ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಲೋಕಾಯುಕ್ತರು, ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿರುವುದು ಕಂಡುಬಂದಿದೆ. ಅವುಗಳನ್ನು ಸರಿಪಡಿಸಬೇಕಾದ ಜವಾಬ್ದಾರಿ ವೈದ್ಯಕೀಯ ಇಲಾಖೆ, ಸೂಪರಿಂಟೆಂಡೆಂಟ್ ಹಾಗೂ ವೈದ್ಯರುಗಳ ಮೇಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಕೆಲವೆಡೆ ಧೂಳಿನಿಂದ ಕೂಡಿದೆ, ಶೌಚಾಲಯದಲ್ಲಿ ನೀರಿನ ಕೊರತೆ ಇದೆ. ಕರ್ತವ್ಯದಲ್ಲಿರಬೇಕಿದ್ದ ವೈದ್ಯರಲ್ಲಿ ಒಬ್ಬರು ಮಾತ್ರ ಇದ್ದರು. ವೈದ್ಯರು, ವೈದ್ಯಕೀಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕಡೆ ಗಮನಹರಿಸಬೇಕು. ಸಮಸ್ಯೆಗಳ ಬಗ್ಗೆ ವರದಿ ದಾಖಲು ಮಾಡಿಕೊಳ್ಳಲಾಗಿದೆ. ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ