ಸೋಮರಡ್ಡಿ ಅಳವಂಡಿ
ಕೊಪ್ಪಳ:ಇಲ್ಲಿನ ನಗರಸಭೆಯಲ್ಲಿ ₹10 ಕೋಟಿಗೂ ಅಧಿಕ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಮತ್ತು ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ದಾಳಿ ಮಾಡಿದ್ದ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ಅವರ ದಿಢೀರ್ ವರ್ಗಾವಣೆಗೆ ತನಿಖೆಗೆ ಅನುಮತಿ ಸಿಕ್ಕ ಪ್ರತಿ ಎರಡು ದಿನ ಮೊದಲೇ ಸೋರಿಕೆಯಾಗಿದ್ದೇ ಪ್ರಮುಖ ಕಾರಣ ಎನ್ನುವ ಮಾಹಿತಿ ಹೊರಬಿದ್ದಿದೆ.
ಡಿವೈಎಸ್ಪಿ ವಸಂತಕುಮಾರ ಅವರನ್ನು ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಪ್ರಭಾವದಿಂದಲೇ ಎತ್ತಂಗಡಿ ಮಾಡಿಸಲಾಗಿದೆ ಎಂದು ಪ್ರತಿಪಕ್ಷಗಳ ಮುಖಂಡರು ಹೇಳಿದರೆ, ಇದರಲ್ಲಿ ನಮ್ಮದೇನೂ ಪಾತ್ರವಿಲ್ಲವೆಂದು ಸಂಸದ ರಾಜಶೇಖರ ಹಿಟ್ನಾಳ ಆರೋಪ ತಳ್ಳಿ ಹಾಕಿದ್ದರು. ಆದರೆ, ಈಗ ಹೊರಬಿದ್ದ ಮಾಹಿತಿ ಪ್ರಕಾರ, ದಾಳಿಗೂ ಮುನ್ನವೇ ದಾಳಿ ಮಾಡುವ ಕುರಿತು ದೊರೆತ ಅನುಮತಿ ಪ್ರತಿ ನಗರಸಭೆ ಅಧಿಕಾರಿಗಳು ಸೇರಿದಂತೆ ಹಲವರ ಮೊಬೈಲ್‌ನಲ್ಲಿ ಹರಿದಾಡಿದೆ. ಈ ಮಾಹಿತಿ ತಿಳಿದು ಸೆ.13,14 ರಜೆ ಇದ್ದರೂ ನಗರಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.ಫಾರ್ಮ್ ನಂ. 3 ಸೇರಿದಂತೆ ಅನೇಕ ಕಡತಗಳ ದೋಷ ಸರಿಪಡಿಸಿದ ಮೇಲೆಯೇ ಲೋಕಾಯುಕ್ತರು ದಾಳಿ ಮಾಡಿದ್ದಾರೆ ಎನ್ನುವುದು ಹಾಗೂ ದಾಳಿ ಮಾಡುವ ಮಾಹಿತಿ ಸೋರಿಕೆಯಾಗಿರುವುದು ವಸಂತಕುಮಾರ ವರ್ಗಾವಣೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ದಾಳಿಗೂ ಮುನ್ನ ಭೇಟಿ:ವಸಂತಕುಮಾರ ದಾಳಿ ಮಾಡುವ ಖಚಿತ ಮಾಹಿತಿ ಅರಿತ ನಗರಸಭೆ ಅಧಿಕಾರಿ ಒಬ್ಬರು ಭೇಟಿಯಾಗಿ ಅವರಿಗೆ ಹೂ ಗುಚ್ಛ ನೀಡಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವೇಳೆ ಇವರೊಂದಿಗೆ ಮತ್ತ್ಯಾರು ಇದ್ದರು ಎಂಬುದು ಕುತೂಹಲ ಕೆರಳಿಸಿದೆ.
ಏನಿದು ಆರೋಪ?ನಗರಸಭೆಯಲ್ಲಿ ಕ್ರಿಯಾಯೋಜನೆ ಮಾಡದೆ ₹1 ಲಕ್ಷ ವರೆಗೆ ಖರ್ಚು ಮಾಡುವುದಕ್ಕೆ ಅಧಿಕಾರವಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡು ಕಾಮಗಾರಿ ನಿರ್ವಹಿಸದೆ ₹ 2.23 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ₹1.5 ಕೋಟಿ ಅಕ್ರಮವಾಗಿದೆ ಎನ್ನುವ ಗಂಭೀರ ಆರೋಪವಿದೆ. ನಗರಸಭೆ ನಿಧಿ ಮತ್ತು ನೀರು ಪೂರೈಕೆ ನಿಧಿಯಿಂದ ₹5 ಲಕ್ಷ ಮೊತ್ತದ ಯೋಜನೆಗಳನ್ನು ಪ್ರತ್ಯೇಕವಾಗಿ ಮಾಡಿ, ಕ್ರಿಯಾಯೋಜನೆ ಸಿದ್ಧಪಡಿಸದೆ ₹ 6,06,48,157 ವೆಚ್ಚ ಮಾಡಿದ ಲೆಕ್ಕ ತೋರಿಸಿ, ಬಿಲ್ ಎತ್ತಲಾಗಿದೆ. ನಗರಸಭೆ ನಿಧಿ ಹಾಗೂ ನೀರು ಪೂರೈಕೆಯ ವಿಭಾಗದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸದೆ ಕಾಗದದಲ್ಲಿಯೇ ಎಲ್ಲವನ್ನು ಮಾಡಿ ₹ 6,38,30,091 ಎತ್ತಲಾಗಿದೆ. ಇದರಲ್ಲಿಯೂ ₹ 3.5 ಕೋಟಿ ಅಕ್ರಮವಾಗಿರುವ ಆರೋಪವಿದೆ. ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ₹ 1.90 ಕೋಟಿ ಬಳಕೆ ಮಾಡಲಾಗಿದ್ದು, ಇದರಲ್ಲಿಯೂ ಭಾರಿ ಅಕ್ರಮವಾಗಿದೆ ಎನ್ನುವ ಆರೋಪವಿದೆ.
ಈ ದೂರು ಫೆಬ್ರುವರಿಯಲ್ಲಿಯೇ ಸಲ್ಲಿಕೆಯಾಗಿದ್ದು ಇದರ ಪೂರಕ ದಾಖಲೆಯನ್ನು ಸಹ ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ. ಇದಾದ ಮೇಲೆ ಪ್ರಕ್ರಿಯೆ ನಡೆದು, ಈಗ ಲೋಕಾಯುಕ್ತ ಅಧಿಕಾರಿಗಳಿಗೆ ಮೇಲಧಿಕಾರಿಗಳ ಅನುಮತಿ ದೊರೆತ ಮೇಲೆ ದಾಳಿಯಾಗಿದೆ. ಈ ದಾಳಿಗೂ ಮುನ್ನವೇ ಮಾಹಿತಿ ಸೋರಿಕೆಯಾಗಿರುವುದೇ ರಾದ್ಧಾಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.