ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಾಯುಕ್ತ ಅಧಿಕಾರಿಗಳ ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ 15ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. ಕೆಲ ಅರ್ಜಿಗಳು ಮಹಾನಗರ ಪಾಲಿಕೆಗೆ ಸಂಬಂಧಿಸಿದ್ದಾದರೆ, ಇನ್ನುಳಿದ ಬಹುತೇಕ ಅರ್ಜಿಗಳು ಗ್ರಾಪಂಗಳಿಗೆ ಸಂಬಂಧಿಸಿದ್ದಾಗಿದ್ದವು.ಈ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುರೇಶ್ ಮಾತನಾಡಿ, ಸಾಕಷ್ಟು ಪಿಡಿಒಗಳು ಹಲವು ತಪ್ಪುಗಳನ್ನು ಮಾಡುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡುತ್ತಿ ರುವುದು ಸಹ ಕಂಡುಬರುತ್ತಿದೆ. ಸಾರ್ವಜನಿಕರನ್ನು ಅನವಶ್ಯಕವಾಗಿ ಅಲೆದಾಡಿಸುತ್ತಿರುವ ದೂರುಗಳು ಸಹ ವ್ಯಾಪಕವಾಗಿದೆ. ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾದರೆ ಅಧಿಕಾರಿಗಳು ಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಮ್ಮ ಬಳಿ ಬಂದ ದೂರಿನ ಅನ್ವಯ ಒಂದು ಕೋಳಿ ಫಾರಂಗೆ ನಾನೇ ಖುದ್ದು ಭೇಟಿ ನೀಡಿ ಬಂದಿದ್ದೇನೆ. ಕೋಳಿ ಫಾರಂ ದಾಖಲಾತಿಯಲ್ಲಿ ಇರುವ ಜಾಗ ಒಂದಾದರೆ, ಈಗೀರುವ ಜಾಗವೇ ಮತ್ತೊಂದು. ಅಲ್ಲಿ ಸುತ್ತಮುತ್ತಲ ಜನರು ಊಟ ಮಾಡಲೂ ಆಗುತ್ತಿಲ್ಲ. ಅದನ್ನು ತೆರವು ಮಾಡಲು ಸೂಚಿಸಿದ್ದರೂ ಪಿಡಿಒ ಕ್ರಮ ತೆಗೆದುಕೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅಶೋಕ ಸಂಜೀವಿನಿ ಹಿಂದೆ: ನಗರದ ಬಿಹೆಚ್ ರಸ್ತೆಯ ಅಶೋಕ ಸಂಜೀವಿನಿ ಆಸ್ಪತ್ರೆ ಪಕ್ಕದಲ್ಲೇ ಖಾಲಿ ನಿವೇಶನದಲ್ಲಿ ಶೆಡ್ ನಿರ್ಮಿಸಲಾಗಿದೆ. ಅದರ ಹಿಂದೆ ಕೆರೆಯಂತೆ ಕೊಳಚೆ ನೀರು ನಿಂತಿದೆ. ಅದನ್ನು ತೆರವು ಮಾಡುವಂತೆ ಪಾಲಿಕೆಗೆ ಕೇಳಿದರೂ ಮಾಡುತ್ತಿಲ್ಲ ಎಂದು ದೂರು ದಾಖಲಾಯಿತು.ಯುಜಿಡಿ ಬ್ಲಾಕ್:
ವಿದ್ಯಾನಗರದ ದುರ್ಗಮ್ಮ ದೇವಸ್ಥಾನದ ರಸ್ತೆ ಎಲ್‌ಆರ್‌ಎಲ್ ಕಟ್ಟಡದ ಹತ್ತಿರ ಯುಜಿಡಿ ಬ್ಲಾಕ್ ಆಗಿದೆ. ಸುತ್ತಮುತ್ತಲಿನ ಜನರಿಗೆ ಸಮಸ್ಯೆ ಆಗುತ್ತಿದೆ. ಯಾರೂ ಗಮನ ಹರಿಸುತ್ತಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಕೂಡ ಅರ್ಧಂಬರ್ಧ ಆಗಿದೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಸಹಿತ ಎಲ್ಲರಿಗೂ ಮನವಿ ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ಅಲ್ಲಿನ ನಾಗರೀಕರು ದೂರಿದರು.ಕುಂಸಿ ಗ್ರಾಮದ ನಾಗರೀಕರೋರ್ವರು ಅಲ್ಲಿನ ಹನುಮಂತ ದೇವಸ್ಥಾನದ ಜಾಗದ ಕುರಿತು ಅಲ್ಲಿನ ಗ್ರಾಪಂನಲ್ಲಿ ಮಾಹಿತಿ ಕೇಳಿದ್ದರು. ಆದರೆ, ಗ್ರಾಪಂ ಮಾಹಿತಿ ಅಧಿಕಾರಿ ಆ ಜಾಗ ಮೂರನೇ ವ್ಯಕ್ತಿಗೆ ಸೇರಿರುವುದರಿಂದ ಮಾಹಿತಿ ನೀಡಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ದೇವಸ್ಥಾನ ಮುಜುರಾಯಿ ಇಲಾಖೆಗೆ ಸೇರಿದ್ದಾಗಿದೆ. 1920 ರಲ್ಲಿ ಇದಕ್ಕೆ ವ್ಯಕ್ತಿಯೋರ್ವರು ಒಂದು ಎಕರೆಗಿಂತ ಹೆಚ್ಚು ಜಮೀನನ್ನು ದಾನವಾಗಿ ನೀಡಿದ್ದಾರೆ. ಹಾಗಿದ್ದರೂ ಮಾಹಿತಿ ನೀಡಲು ಅವಕಾಶ ಇಲ್ಲ ಎಂದು ತಿಳಿಸಿರುವುದು ಸರಿಯೇ ಎಂದು ಪ್ರಶ್ನಿಸಿ ಲೋಕಾಯುಕ್ತ ಅಕಾರಿಗಳಿಗೆ ದೂರು ಸಲ್ಲಿಸಿದರು.ಲೋಕಾಯುಕ್ತ ಅಧಿಕಾರಿಗಳಾದ ಪ್ರಕಾಶ್, ವೀರಬಸಪ್ಪ ಕುಸ್ಲಾ ಪುರ, ಸುರೇಂದ್ರ, ಜಯಂತ್, ಗಂಗಾಧರ್, ತಾಪಂ ಇಒ ಅವಿನಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಾದ ಹಾಜರಿದ್ದರು.