ಆರೋಗ್ಯ ಕ್ಷೇಮ ಕೇಂದ್ರಕ್ಕೆ ಲೋಕಾಯುಕ್ತ ಪೊಲೀಸರ ಭೇಟಿ, ಪರಿಶೀಲನೆ

KannadaprabhaNewsNetwork | Published : Jan 24, 2025 12:47 AM

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಮಂಡ್ಯ ಲೋಕಾಯುಕ್ತ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದ ತಂಡ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳಗೊಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಮಂಡ್ಯ ಲೋಕಾಯುಕ್ತ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದ ತಂಡ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ವಾರ್ಡ್‌ಗಳ ಸ್ವಚ್ಛತೆ, ಔಷಧಿ ದಾಸ್ತಾನು ಕೊಠಡಿ ಪರಿಶೀಲನೆ ನಡೆಸಿ ನಂತರ ಮುಖ್ಯ ವೈದ್ಯಾಧಿಕಾರಿ ಪೂರ್ಣಚಂದ್ರ ಅವರಿಂದ ಮಾಹಿತಿ ಪಡೆದರು. ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಹಳೆಯ ಕಾರು ಹಾಗೂ ಪಂಚಾಯ್ತಿ ಕಸದ ವಾಹನವನ್ನು ಗಮನಿಸಿ ವೈದ್ಯಾಧಿಕಾರಿಗಳಿಂದ ಅಗತ್ಯ ಸೂಚನೆ ನೀಡಿದರು.

ನಂತರ ತಾಪಂ ನಿರ್ವಾಹಣಾಧಿಕಾರಿ ಹಾಗೂ ಕೆಆರ್‌ಎಸ್ ಪೊಲೀಸರಿಗೆ ತಕ್ಷಣ ತೆರವುಗೊಳಿಸಲು ಸೂಚಿಸಿದರು. ಬಳಿಕ ಬಲಮುರಿ ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಡಿ ಪರಿಶಿಲನೆ ನಡೆಸಿದರು.

ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ೨ ಲಕ್ಷ ಕೋಟಿ ರು. ಅನುದಾನಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರವು ೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ೨ ಲಕ್ಷ ಕೋಟಿ ರು. ಅನುದಾನ ನೀಡಬೇಕು ಎಂದು ಅಂಬೇಡ್ಕರ್ ಆರ್ಮಿ ರಾಜ್ಯಾಧ್ಯಕ್ಷ ಗಂಗರಾಜು ಆಗ್ರಹಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗೆ ೨೦೧೩-೧೪ರಲ್ಲಿ ವಿಶೇಷ ಘಟಕ ಯೋಜನೆ ಜಾರಿಗೊಳಿಸಿ ಅಂದಿನಿಂದ ೨೦೨೪-೨೫ನೇ ಸಾಳಿನ ವರೆಗೂ ಸುಮಾರು ೨ರಿಂದ ೩ ಲಕ್ಷ ಕೋಟಿಗೂ ಮೇಲ್ಪಟ್ಟು ಅನುದಾನ ಬಿಡುಗಡೆ ಮಾಡಿದ್ದು, ಅನುದಾನದ ಬಳಕೆಯಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಿಐಟಿಯುನ ಸಿ.ಕುಮಾರಿ ಮಾತನಾಡಿ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಇದುವರೆಗೂ ಮೀಸಲಿರಿಸಿದ್ದ ೧ ಲಕ್ಷದ ೫ ಸಾವಿರ ಕೋಟಿ ರು.ಗಳನ್ನು ಹಿಂಪಡೆದು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೂ ಗ್ಯಾರೆಂಟಿ ಯೋಜನೆಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಹಣ ಬಳಸಿಕೊಂಡು ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿದರು.

ದಲಿತ ಹಕ್ಕುಗಳ ಸಮಿತಿ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಿದ್ದು, ಜನವರಿ ೨೨ರಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲು ಒತ್ತಾಯಿಸಿ ವಿಧಾನಸೌದ ಚಲೋ ಚಳವಳಿಯನ್ನು ನಡೆಸುತ್ತಿರುವುದಾಗಿ ಹೇಳಿದರು.

ಬುದ್ಧ ಭಾರತ ಫೌಂಡೇಷನ್‌ನ ಜೆ.ರಾಮಯ್ಯ, ಎಂ.ವಿ.ಕೃಷ್ಣ, ಲೋಕೇಶ್, ಚೌದರಿ, ಪ್ರದೀಪ್‌ಗೌಡ, ಅಮೃತ್ ಜಿ, ಸುಭಾಷ್ ಧರಣಿ ಗೋಷ್ಠಿಯಲ್ಲಿದ್ದರು.

Share this article