ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಕಿರಣಕುಮಾರ ಬೈಂದೂರ ಅವರ ಮನೆ ಹಾಗೂ ಕಚೇರಿ ಸೇರಿದಂತೆ ನಾಲ್ಕು ಕಡೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಹುಬ್ಬಳ್ಳಿ:
ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಕಿರಣಕುಮಾರ ಬೈಂದೂರ ಅವರ ಮನೆ ಹಾಗೂ ಕಚೇರಿ ಸೇರಿದಂತೆ ನಾಲ್ಕು ಕಡೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ತೋಳನಕೇರಿ ಸಮೀಪದ ಅಕ್ಷಯ ಕಾಲನಿಯಲ್ಲಿರುವ ಕಿರಣಕುಮಾರ ಅವರ 6 ತಿಂಗಳ ಹಿಂದಷ್ಟೇ ನಿರ್ಮಿಸಿರುವ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದಲೇ ಪರಿಶೀಲನೆ ನಡೆಸಿದರು. ಮನೆಗೆ ಸಂಬಂಧಿಸಿದ ದಾಖಲೆ, ಹಣ, ಚಿನ್ನಾಭರಣ ಸೇರಿದಂತೆ ವಿವಿಧ ಆಸ್ತಿಗಳ ಕುರಿತ ದಾಖಲೆ ಪರಿಶೀಲಿಸಿದರು.
ಕಿರಣಕುಮಾರ ಪತ್ನಿ ಪ್ರೀತಿ ಬೈಂದೂರ ಕೂಡ ಹೆಸ್ಕಾಂನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಿರಣಕುಮಾರ ಅವರ ತಬೀಬ್‌ಲ್ಯಾಂಡ್‌ನಲ್ಲಿರುವ ಕಚೇರಿ ಹಾಗೂ ಪ್ರೀತಿ ಅವರ ಗೋಪನಕೊಪ್ಪದ ಹೆಸ್ಕಾಂ ಕಚೇರಿಯಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಇದೇ ವೇಳೆ ಧಾರವಾಡದಲ್ಲಿರುವ ಕಿರಣಕುಮಾರ ಅವರ ಸಹೋದರನ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು. ದಾಳಿ ವೇಳೆ ವಿವಿಧ ದಾಖಲೆಗಳು, ಹಣ, ಚಿನ್ನಾಭರಣ ಹಾಗೂ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ವಿವರಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ಪಿ ಬಸವರಾಜ ಬುದ್ನಿ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ನಾಲ್ಕೂ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು.
ಪತ್ತೆಯಾದ ಆಸ್ತಿ...
ದಾಳಿಯ ವೇಳೆ ಸುಮಾರು ₹ 3 ಕೋಟಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ₹4.5 ಲಕ್ಷ ನಗದು, 565 ಗ್ರಾಂ ಚಿನ್ನಾಭರಣ, 3.5 ಕೆಜಿ ಬೆಳ್ಳಿ ವಸ್ತು, ಎರಡು ಕಾರು, ಒಂದು ಮನೆ, ಒಂದು ವಾಣಿಜ್ಯ ಸಂಕೀರ್ಣ ಹಾಗೂ ಎರಡು ಎಕರೆ ಕೃಷಿ ಜಮೀನು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.