ಕೊಪ್ಪಳ: ಕೊಪ್ಪಳ ಕಿಮ್ಸ್ ಕಾಲೇಜಿನ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರ ನಿವಾಸ, ಕಾಲೇಜು ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದೆ. ಬೆಳ್ಳಂಬೆಳಗ್ಗೆ ಮಾಡಲಾದ ದಾಳಿಯಿಂದ ಅಪಾರ ಆಸ್ತಿ, ಪಾಸ್ತಿ, ನಗದು, ದಾಖಲೆ ಪತ್ತೆಯಾಗಿವೆ ಎನ್ನಲಾಗಿದೆ.
ಹತ್ತು ಕಡೆ ದಾಳಿ: ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರಿಗೆ ಸಂಬಂಧಿಸಿದ ಹತ್ತು ಕಡೆ ದಾಳಿ ಮಾಡಲಾಗಿದೆ. ಭಾಗ್ಯನಗರದಲ್ಲಿರುವ ಅವರ ನಿವಾಸ, ನವಚೇತನ ಕಾಲೇಜು, ಸ್ವಗ್ರಾಮ, ಸಂಬಂಧಿಕರ ಮನೆ ಸೇರಿದಂತೆ ಬರೋಬ್ಬರಿ 10 ಕಡೆ ದಾಳಿ ಮಾಡಲಾಗಿದೆ.
ಖಾಸಗಿ ದೂರು:ಖಾಸಗಿಯಾಗಿ ಸಲ್ಲಿಕೆಯಾಗಿರುವ ಹಲವಾರು ದೂರು ಆಧರಿಸಿ ದಾಳಿ ಮಾಡಲಾಗಿದ್ದು, ದಾಳಿಯಲ್ಲಿ ಪತ್ತೆಯಾದ ವಸ್ತುಗಳ ದಾಖಲಿಸುವ ಕಾರ್ಯ ಸಂಜೆಯಾದರೂ ಮುಂದುವರೆದಿದೆ.ಇಡಿ ಅಧಿಕಾರಿಗಳ ವಿರುದ್ಧ ಆರೋಪ: ವಾಲ್ಮೀಕಿ ಹಗರಣದಲ್ಲಿ ಇವರು ಅಮಾನತ್ತಾಗಿದ್ದರಲ್ಲದೆ, ಈ ವೇಳೆಯಲ್ಲಿ ಇಡಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸುವ ಮೂಲಕ ಭಾರೀ ಸುದ್ದಿಯಾಗಿದ್ದರು.
ವಾಲ್ಮೀಕಿ ಹಗರಣ ನಡೆದ ಸಂದರ್ಭದಲ್ಲಿ ಇವರು ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಇರಲಿಲ್ಲ. ಆ ನಂತರ ಅಂದರೆ ಇಡಿ ದಾಳಿ ಮಾಡಿದ್ದ ಸಂದರ್ಭದಲ್ಲಿ ಇವರೇ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದಿದ್ದರು. ಆಗಲೂ ಇವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತ್ತು ಮಾಡಲಾಗಿತ್ತು. ಇಡಿ ದಾಳಿಯ ವೇಳೆ ಇವರನ್ನು ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಆಗ ಇಡಿ ಅಧಿಕಾರಿಗಳ ವಿರುದ್ಧವೇ ಆರೋಪ ಮಾಡುವ ಮೂಲಕ ಭಾರೀ ಸುದ್ದಿಯಾಗಿದ್ದರು.