ಬಳ್ಳಾರಿ: ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿ, ಮಹಾನಗರ ಪಾಲಿಕೆ, ತಾಲೂಕು ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ, ಕಡತಗಳು ಹಾಗೂ ವಿವಿಧ ದಾಖಲೆಗಳ ಪರಿಶೀಲನೆ ಆರಂಭಿಸಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿರುವ ಅಧಿಕಾರಿಗಳು ಕಚೇರಿಯ ವಿವಿಧ ವಿಭಾಗಗಳಿಗೆ ತೆರಳಿ ಕಡತ, ದಾಖಲೆ ಹಾಗೂ ಆಡಳಿತಾತ್ಮಕ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಾಹನ ನೋಂದಣಿ, ಚಾಲನಾ ಪರವಾನಗಿ ವಿತರಣೆ ಸೇರಿದಂತೆ ಕಚೇರಿಯ ವಿವಿಧ ವಿಭಾಗಗಳಲ್ಲಿ ನಿರ್ವಹಿಸಲಾಗುತ್ತಿರುವ ದಾಖಲೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಜತೆಗೆ ಕಚೇರಿಯಲ್ಲಿರುವ ಕಡತಗಳ ನಿರ್ವಹಣೆ, ಸರ್ಕಾರಿ ಸೇವೆಗಳ ವಿಲೇವಾರಿ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಗತ್ಯವಿರುವ ಕಡೆ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಬೆಳಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ಕಚೇರಿಯಲ್ಲೇ ಮೊಕ್ಕಾಂ ಹೂಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಸಾರ್ವಜನಿಕ ಸೇವೆಗಳಿಗಾಗಿ ಆಗಮಿಸಿದ್ದವರಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕುತೂಹಲ ಮೂಡಿಸಿತು.
ಹಲವೆಡೆ ದಾಖಲೆಗಳ ತಲಾಶ್:ಆರ್‌ಟಿಒ ಕಚೇರಿಯ ಜತೆಗೆ ಮಹಾನಗರ ಪಾಲಿಕೆ ಹಾಗೂ ತಾಲೂಕು ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಯಾ ಕಚೇರಿಗಳಲ್ಲಿನ ಕಡತ, ಆಡಳಿತಾತ್ಮಕ ದಾಖಲೆ ಮತ್ತು ವಿವಿಧ ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿ ಪರಿಶೀಲಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದಲೂ ಅಗತ್ಯ ವಿವರ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳ ವಿಲೇವಾರಿ, ಕಡತಗಳ ನಿರ್ವಹಣೆ ಮತ್ತು ಆಡಳಿತಾತ್ಮಕ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ. ಆದರೆ ದಾಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಯಾವ ಅಂಶಗಳ ಮೇಲೆ ಅಧಿಕಾರಿಗಳು ಗಮನಹರಿಸಿದ್ದಾರೆ ಮತ್ತು ಯಾವ ದಾಖಲೆಗಳಲ್ಲಿ ಲೋಪಗಳು ಕಂಡುಬಂದಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಲೋಕಾಯುಕ್ತ ಪೊಲೀಸರು ಮುಂದಿನ ಎರಡು ದಿನಗಳ ಕಾಲ ಬಳ್ಳಾರಿಯಲ್ಲಿಯೇ ವಾಸ್ತವ್ಯ ಹೂಡಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪರಿಶೀಲನೆ ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಇನ್ನಷ್ಟು ಕಚೇರಿಗಳ ದಾಖಲೆ ಪರಿಶೀಲಿಸುವ ಸಾಧ್ಯತೆಯೂ ಇದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ ಹಾಗೂ ದಾಖಲೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಲೋಕಾಯುಕ್ತರ ಈ ದಿಢೀರ್ ಕಾರ್ಯಾಚರಣೆಯು ಜಿಲ್ಲೆಯ ಸರ್ಕಾರಿ ಕಚೇರಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.