ಕನ್ನಡಪ್ರಭ ವಾರ್ತೆ ಶಹಾಪುರ
ನಗರದಲ್ಲಿ ಅಸ್ವಚ್ಛತೆ ಹಾಗೂ ನಗರಸಭೆ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ನೀವು ಯಾವ ಸೀಮೆ ಅಧಿಕಾರಿ? ಇದೇನಾ ನಿಮ್ಮ ಕಾರ್ಯವೈಖರಿ. ಸ್ವಲ್ಪನಾದರೂ ಜವಾಬ್ಧಾರಿ ಇಲ್ಲ. ಮಾರುಕಟ್ಟೆ ಸ್ಥಿತಿ ಕಂಡು ನಿಮ್ಮ ಬೇಜವಾಬ್ಧಾರಿ ತನಕ್ಕೆ ಇದು ಸಾಕ್ಷಿಯಾಗಿದೆ. ನಿಮ್ಮಂತ ಅಧಿಕಾರಿಗಳಿಂದ ನಗರದ ಜನತೆಯನ್ನು ದೇವರೇ ಕಾಪಾಡಬೇಕು ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದುಕೊರತೆ, ಅಹವಾಲು ಸ್ವೀಕಾರ ಕಾರ್ಯಕ್ರಮ ಮುಗಿಸಿದ ನಂತರ ಸಾರ್ವಜನಿಕರ ದೂರಿನ ಮೇರೆಗೆ ನಗರ ಸಂಚಾರ ನಡೆಸಿದ ಅವರು, ನಗರದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಹತ್ತಿರ ಅಪಾಯ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ವೀಕ್ಷಿಸಿ, ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ತಕ್ಷಣ ಸರಿಪಡಿಸಿ ಎಂದು ತರಾಟೆಗೆ ತೆಗೆದುಕೊಂಡು ಸೂಚಿಸಿದರು.ಇದೇ ವೇಳೆ ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿದಾಗ, ಗ್ರಾಹಕರೊಬ್ಬರು ನೀರು ತುಂಬಿಕೊಳ್ಳುತ್ತಿದ್ದರು. 20 ಲೀಟರ್ ಬಾಟಲಿಗೆ ಎಷ್ಟು ಕೊಡುತ್ತೀರಾ ಎಂದು ವಿಚಾರಿಸಿದಾಗ, ಗ್ರಾಹಕರು 5 ರುಪಾಯಿಗಳ 2 ನಾಣ್ಯಗಳ ಹಾಕಿದ್ದೇನೆ ಎಂದು ಹೇಳಿದರು. ಆಗ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತರಿಗೆ, ನೀರಿನ ಘಟಕಕ್ಕೆ ನೀವು ಭೇಟಿ ನೀಡಿ ಪರಿಶೀಲನೆ ಮಾಡುವುದಿಲ್ಲವೆ, ಇದರ ಬಗ್ಗೆ ನಾನು ಮಾತನಾಡಿದರೆ ನೀವು ಅಮಾನತು ಆಗ್ತೀರಾ, ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಎಸ್ಪಿ ಸೂಚಿಸಿದರು.
ಅನಧಿಕೃತ ಡಬ್ಬಿಗಳ ತೆರವು: ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಡಬ್ಬಿಗಳನ್ನು ಇಟ್ಟಿರುವುದನ್ನು ಗಮನಕ್ಕೆ ಬರುತ್ತಿದ್ದಂತೆ, ತಕ್ಷಣ ಈ ಡಬ್ಬಿಗಳನ್ನು ತೆರವುಗೊಳಿಸಿ ಇಲ್ಲವೇ ಬಾಡಿಗೆ ನಿಗದಿಪಡಿಸಿ ಎಂದು ಲೋಕಾಯುಕ್ತ ಎಸ್ಪಿ ಆಂಟೋನಿ ಅವರು ಸೂಚನೆ ನೀಡಿದರು.
ಡಿವೈಎಸ್ಪಿ ಹಣಮಂತರಾಯ, ಪೊಲೀಸ್ ನಿರೀಕ್ಷಕ ಹಣಮಂತ ಸಣ್ಣಮನಿ, ಪಿ.ಐ.ರಾಜಶೇಖರ್ ಹಳಿಗೋದಿ, ಪೌರಾಯುಕ್ತ ರಮೇಶ್ ಬಡಿಗೇರ್, ನಗರಸಭೆ ಎಂಜಿನಿಯರ್ ನಾನಾಸಾಬ ಮಡಿವಾಳ ಸೇರಿ ಲೋಕಾಯುಕ್ತ ಸಿಬ್ಬಂದಿ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.