ಅಧಿಕಾರಿಗಳ ಚಳಿ ಬಿಡಿಸಿದ ಲೋಕಾಯುಕ್ತರು

KannadaprabhaNewsNetwork |  
Published : Nov 30, 2024, 12:51 AM IST
ಹುಕ್ಕೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಲೋಕಾಯುಕ್ತ ಡಿಎಸ್ಪಿ ಬಿ.ಎಸ್.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಸಾರ್ವಜನಿಕ ಆಡಳಿತದಲ್ಲಿ ಗುಣಮಟ್ಟ ಸುಧಾರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಲೋಕಾಯುಕ್ತ ಇಲಾಖೆ ಹುಕ್ಕೇರಿಯಲ್ಲಿ ಬುಧವಾರ ನಡೆಸಿದ ಜನಸಂಪರ್ಕ ಸಭೆಯಲ್ಲಿ ಜನರು ತಮ್ಮ ಅಹವಾಲು, ಸಮಸ್ಯೆಗಳನ್ನು ಬಿಚ್ಚಿಟ್ಟು ಸ್ಥಳೀಯ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಾರ್ವಜನಿಕ ಆಡಳಿತದಲ್ಲಿ ಗುಣಮಟ್ಟ ಸುಧಾರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಲೋಕಾಯುಕ್ತ ಇಲಾಖೆ ಹುಕ್ಕೇರಿಯಲ್ಲಿ ಬುಧವಾರ ನಡೆಸಿದ ಜನಸಂಪರ್ಕ ಸಭೆಯಲ್ಲಿ ಜನರು ತಮ್ಮ ಅಹವಾಲು, ಸಮಸ್ಯೆಗಳನ್ನು ಬಿಚ್ಚಿಟ್ಟು ಸ್ಥಳೀಯ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಸಾರ್ವಜನಿಕರು ತಮ್ಮ ಅಹವಾಲು, ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಲ್ಲಿ ಕೆಲ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ನಿಯೋಜಿತ ಅಡವಿಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆಗಳ ಸ್ಪಷ್ಟತೆ ಇಲ್ಲವಾಗಿದ್ದು ಬೇಕಾಬಿಟ್ಟಿಯಾಗಿ ಪೈಪಲೈನ್ ಅಳವಡಿಸಿ ರೈತರ ಬೆಳೆಗಳಿಗೆ ನಷ್ಟವನ್ನುಂಟು ಮಾಡಲಾಗಿದೆ. ಇದಕ್ಕೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನೇರ ಹೊಣೆಗಾರರಿದ್ದು ರೈತರಿಗೆ ಸೂಕ್ತ ಪರಿಹಾರ ವಿತರಿಸುವಂತಾಗಬೇಕು ಎಂದು ನ್ಯಾಯವಾದಿ ರಾಮಚಂದ್ರ ಜೋಶಿ, ಮುಖಂಡ ಚಂದು ಗಂಗಣ್ಣವರ ಆಗ್ರಹಿಸಿದರು.ಮಿನಿವಿಧಾನಸೌಧ ಕಚೇರಿ ಸಂಪೂರ್ಣ ಶಿಥಿಲಗೊಂಡಿದ್ದು ಜನ ಹಾಗೂ ವಾಹನ ಸಂಚಾರ ಕಷ್ಟಕರವಾಗಿದೆ. ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು. ಖಾಸಗಿ ಫೈನಾನ್ಸ್ ಕಂಪನಿಗಳಿಂದ ಬಲವಂತದ ಸಾಲ ವಸೂಲಾತಿ ನಡೆದಿದ್ದು ಇದರಿಂದ ಅನೇಕ ಕುಟುಂಬಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಹುಕ್ಕೇರಿ ಪುರಸಭೆಯಲ್ಲಿ ಏಜೆಂಟರ್‌ ಹಾವಳಿ ಹೆಚ್ಚಿದ್ದು ಜನರಿಗೆ ವಿವಿಧ ಸೇವೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮುಖಂಡರಾದ ಸದಾನಂದ ಕರಾಳೆ, ರೋಹಿತ ಚೌಗಲಾ, ರಾಜು ಕುರಂದವಾಡೆ, ಪ್ರಕಾಶ ಮೈಲಾಖೆ ದೂರಿದರು.ತಾಲೂಕು ಆಡಳಿತದ ಕಾರ್ಯವೈಖರಿ ಜನವಿರೋಧಿಯಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಲ್ಲ ಕಚೇರಿಗಳಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ಅನಿರೀಕ್ಷಿತ ದಾಳಿ ಮಾಡಬೇಕು ಎಂದು ದಲಿತ ಮುಖಂಡರಾದ ಬಸವರಾಜ ಬೆಳವಿ, ಶ್ರೀಕಾಂತ ತಳವಾರ ಎಂದು ಒತ್ತಾಯಿಸಿದರು.ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಲೋಕಾಯುಕ್ತ ಡಿಎಸ್ಪಿ ಬಿ.ಎಸ್.ಪಾಟೀಲ ಮಾತನಾಡಿ, ಸರ್ಕಾರಿ ನೌಕರರೆಂದರೆ ಸಾರ್ವಜನಿಕರ ಸೇವಕ ಎಂಬ ಭಾವನೆಯಿಂದ ಕರ್ತವ್ಯ ನಿಭಾಯಿಸಬೇಕು. ಸಾರ್ವಜನಿಕರಿಂದ ಲಂಚ ಪಡೆಯುವುದು, ಅನಗತ್ಯ ವಿಳಂಬ ಧೋರಣೆ, ಜನರನ್ನು ಕಚೇರಿಗಳಿಗೆ ಅಲೆದಾಡಿಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಡಿಎಸ್ಪಿ ಭರತ ರೆಡ್ಡಿ, ಪೊಲೀಸ್ ನಿರೀಕ್ಷಕರಾದ ಎ.ಆರ್.ಕಲಾದಗಿ, ಸಂಗಮೇಶ ಹೊಸಮನಿ, ತಹಸೀಲ್ದಾರ್‌ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್.ಮಲ್ಲಾಡದ, ಪುರಸಭೆ ಮುಖ್ಯಾಧಿಕಾರಿಗಳಾದ ಈಶ್ವರ ಸಿದ್ನಾಳ, ಪ್ರಕಾಶ ಮಠದ ಮತ್ತಿತರರು ಉಪಸ್ಥಿತರಿದ್ದರು.ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಸ್ವಾಗತಿಸಿದರು. ತಾಪಂ ಮ್ಯಾನೇಜರ್ ಅವಿನಾಶ ಹೊಳೆಪ್ಪಗೋಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೃಢ ಸಂಕಲ್ಪ, ಅಚಲ ವಿಶ್ವಾಸದಿಂದ ಯಶಸ್ಸು ಸಾಧ್ಯ
ಧಾರ್ಮಿಕ, ಪ್ರಾಚೀನ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ