ಸುಧೀರ್ಘ ಪ್ರಧಾನಿ ದಾಖಲೆ : ಬಿಜೆಪಿ ಸಂಭ್ರಮ

KannadaprabhaNewsNetwork |  
Published : Jun 11, 2026, 02:45 AM IST
Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರನ್ನು ಹಿಂದಿಕ್ಕಿ ದೇಶದ ಸುದೀರ್ಘಾವಧಿ ಪಿಎಂ ಎನ್ನುವ ದಾಖಲೆ ಬರೆದಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ.

  ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರನ್ನು ಹಿಂದಿಕ್ಕಿ ದೇಶದ ಸುದೀರ್ಘಾವಧಿ ಪಿಎಂ ಎನ್ನುವ ದಾಖಲೆ ಬರೆದಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ. ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇದೇ ವೇಳೆ, ದೇವಾಲಯಗಳಲ್ಲಿ ಮೋದಿ ಹೆಸರಲ್ಲಿ ವಿಶೇಷ ಪೂಜೆ ನೆರವೇರಿಸಿ, ಮೋದಿಯವರಿಗೆ ಶುಭ ಹಾರೈಸಲಾಗುತ್ತಿದೆ.

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದೇ ವೇಳೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ವಿಧಾನಸೌಧದಲ್ಲಿರುವ ಅರಳಿ ಮುನೇಶ್ವರ ದೇವಸ್ಥಾನದಲ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರವಾಲ್‌ ನೇತೃತ್ವದಲ್ಲಿ ಶೇಷಾದ್ರಿಪುರಂನಲ್ಲಿರುವ ರಾಮಾಂಜನೇಯ ದೇವಸ್ಥಾನದಲ್ಲಿ, ಕೇಂದ್ರ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಆರ್‌ಪಿಸಿ ಲೇಔಟ್‌ನ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮೋದಿಯವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ವಿನೋಬನಗರದಲ್ಲಿರುವ ಅಭಿಷ್ಟವರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇಶವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿಗೆ ಇನ್ನಷ್ಟು ಕಾಲ ದೇಶದ ಸೇವೆ ಮಾಡಲು ಮತ್ತು ಭಾರತವನ್ನು ಸರ್ವತೋಮುಖ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ವಿಘ್ನನಿವಾರಕ ಗಣೇಶನು ಶಕ್ತಿ, ಆಯುಷ್ಯ, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಲಾಯಿತು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಮೋದಿ ಪರವಾಗಿ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಸಾಗರದಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸಾಗರದಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ದಾವಣಗೆರೆಯಲ್ಲಿ ದೊಡ್ಡಪೇಟೆ ಶ್ರೀ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮೋದಿಯವರಿಗೆ ಶುಭ ಹಾರೈಸಲಾಯಿತು.

ಗಣಪತಿ ದೇಗುಲದವರೆಗೂ ಜಾಥಾ

ಮೈಸೂರಿನಲ್ಲಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಅಗ್ರಹಾರ ವೃತ್ತದಿಂದ ನೂರೊಂದು ಗಣಪತಿ ದೇಗುಲದವರೆಗೂ ಜಾಥಾದಲ್ಲಿ ಸಾಗಿದ ಕಾರ್ಯಕರ್ತರು, ನೂರೊಂದು ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ, ಮೋದಿ ಪರ ಘೋಷಣೆಗಳು ಮೊಳಗಿದವು. ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೋದಿ ಹೆಸರಲ್ಲಿ ಕುಂಕುಮಾರ್ಚನೆ, ಅಷ್ಟೋತ್ತರ ಮಂತ್ರದ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಗರ್ಭಗುಡಿಯಲ್ಲಿ ಮೋದಿ ಫೋಟೋ‌ ಇಟ್ಟು ಪೂಜೆ ‌ಸಲ್ಲಿಸಲಾಯಿತು. ಈ ವೇಳೆ, ಅಭಿಮಾನಿಗಳು ಮೋದಿ ಭಾವಚಿತ್ರ ಹಿಡಿದು, ಘೋಷಣೆ ಕೂಗಿ‌ ಸಿಹಿ ಹಂಚಿ ಸಂಭ್ರಮಿಸಿದರು.

ಬಾಗಲಕೋಟೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ನೇತೃತ್ವದಲ್ಲಿ ನವನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ಕಲಬುರಗಿ, ಮಂಗಳೂರು, ಶಿರಸಿ ಸೇರಿ ರಾಜ್ಯದ ಇತರೆಡೆಯ ದೇವಸ್ಥಾನಗಳಲ್ಲೂ ಮೋದಿ ಹೆಸರಲ್ಲಿ ವಿಶೇಷ ಪೂಜೆಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬುಧವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ?
ಪಶುವೈದ್ಯ ನೇಮಕ ಅಕ್ರಮದಲ್ಲೂ ಶಿವಶಂಕರಪ್ಪ ಸಾಹುಕಾರ್‌ ಎ-1!