ಚಿಕ್ಕಮಗಳೂರು: ಮಕ್ಕಳಿಗೆ ವಸ್ತು, ಹಣ, ಸಂಬಂಧಗಳ ಮೌಲ್ಯವನ್ನು ತಿಳಿಸುವುದರ ಜೊತೆಗೆ ಸ್ನೇಹಿತರಂತೆ ಕಾಣಬೇಕು ಆಗ ಮೌಲ್ಯಯುತ ಸಮಾಜನಿರ್ಮಾಣವಾಗುತ್ತದೆ ಎಂದು ಚಿಕ್ಕಮಗಳೂರು ಬಸವ ತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ತಾಲೂಕಿನ ಸಿಂದಿಗೆರೆಯ ಕರಡಿಗವಿಮಠದ ಕಲ್ಮರುಡೇಶ್ವರ ತಪೋವನದಲ್ಲಿ ಪರಮಪೂಜ್ಯ ಲಿಂ.ಅಜ್ಜಯ್ಯ ಶಿವಯೋಗಿಗಳ 63ನೇ ವರ್ಷದ ಮತ್ತು ಪರಮಪೂಜ್ಯ ಲಿಂ.ಶಂಕರಾನಂದ ಮಹಾಸ್ವಾಮಿಗಳ 4ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭ ಮತ್ತು ಶಿವಾನುಭವ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಅದನ್ನು ನಿಯಂತ್ರಿಸುವಲ್ಲಿ ಪೋಷಕರ ಪಾತ್ರವೂ ಕೂಡಾ ಇದೆ. ಪೋಷಕರು, ಮಕ್ಕಳ ಮೇಲೆ ಸದಾ ನಿಗಾ ಇಡಬೇಕು. ಅದರ ಜೊತೆಗೆ ಬೇರೆಯವರ ಮಕ್ಕಳನ್ನು ಹೋಲಿಕೆ ಮಾಡುವುದು ಮೊದಲು ಬಿಡಬೇಕು. ಹಾಗೆ ಮಾಡುವುದರಿಂದ ಮಕ್ಕಳಲ್ಲಿ ನಾವೇ ಅಸಹಾಯಕ ಭಾವನೆ ಬೆಳೆಸುವುದರ ಜೊತೆಗೆ ಅವರ ದೃಷ್ಟಿಯಲ್ಲಿ ತಂದೆ ತಾಯಿಯರ ಮೇಲಿನ ಭಾವನೆ ಬದಲಾಗಲು ನಾವೇ ಕಾರಣೀಕರ್ತರಾಗುತ್ತೇವೆ. ತಂದೆ ತಾಯಿಯರ ಜೊತೆ ಮಾತನಾಡುವುದಕ್ಕೂ ಹೆದರುವ ರೀತಿಯ ಭಯದ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಬಾರದು. ಒಂದು ವೇಳೆ ಆ ರೀತಿಯ ಭಾವನೆ ಮಕ್ಕಳ ಮನಸ್ಸಿನಲ್ಲಿ ಮೂಡಿದರೆ ಅಂತಹ ಸಂದರ್ಭದಲ್ಲಿ ಮಕ್ಕಳು ದುಶ್ಚಟಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಸ್ನೇಹಿತರಂತೆ ಕಾಣುವುದರ ಜೊತೆಗೆ ಅವರ ಮೇಲೆ ಗಮನ ಇಟ್ಟಿರಬೇಕು ಎಂದು ಸಲಹೆ ನೀಡಿದರು.
ಪ್ರತಿನಿತ್ಯ ಸೂರ್ಯ ಉದಯಿಸಿ ಮರೆಯಾಗುತ್ತಾನೆ. ಈ ನಿಟ್ಟಿನಲ್ಲಿ ಹಿಂದೂ ಸಂಸ್ಕೃತಿಯ ಪ್ರಕಾರ ಪ್ರತಿದಿನ ಹೊಸ ವರ್ಷ ಆಚರಿಸುತ್ತ ಬಂದಿದ್ದೇವೆ. ಅದು ನಮ್ಮ ಸಂಸ್ಕೃತಿ. ಈ ರೀತಿ ಹೊಸ ವರ್ಷ ಆಚರಣೆ ಮಾಡುವ ನೆಪದಲ್ಲಿ ಕುಡಿದು ವಿಕೃತಿ ಮೆರೆಯುವುದು ಸಂಸ್ಕೃತಿಯಲ್ಲ. ಮಹಾತ್ಮ ಗಾಂಧೀಜಿಯವರ ಹೆಸರಿಟ್ಟು ರಸ್ತೆಯಲ್ಲೇ ಮಾರಿಗೊಂದು ಮದ್ಯದಂಗಡಿಗಳನ್ನು ತೆರೆದು ಅವರ ಹೆಸರಿಗೆ ಅಪಕೀರ್ತಿ ತರುತ್ತಿದ್ದೇವೆ ಎಂದರು.ಕರಡಿಗವಿ ಮಠದ ಶಿವಶಂಕರ ಶಿವಯೋಗಿಗಳು ಆಶೀರ್ವಚನ ನೀಡಿ, ಹಿರಿಯರು, ಶ್ರೀಗಳು ಹಾಕಿಕೊಟ್ಟ ನೆಲೆಯಲ್ಲೇ ಮಠ ಕಾರ್ಯ ನಿರ್ವಹಿಸುತ್ತಿದೆ. ಬೇಡುವಾತ ಜಂಗಮನಲ್ಲ, ಬೇಡಿಸಿಕೊಳುವಾತ ಭಕ್ತನಲ್ಲ ಎನ್ನುವ ಮಾತಿನಂತೆ ಮಠ ಹಿಂದಿನಿಂದಲೂ ಸಾಗಿ ಬಂದಿದೆ. ಶ್ರೀಮಠ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ನಾಲ್ಕಾರು ಆಶ್ರಮಗಳಿದ್ದರೂ ಕೂಡಾ ಎಲ್ಲವನ್ನೂ ಸ್ಥಳೀಯರ ಮೂಲಕವೇ ಮುನ್ನಡೆಸಿಕೊಂಡು ಬಂದಿದ್ದು, ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬಯಲು ಸೀಮೆಯ ಭಾಗದಲ್ಲಿ ಈ ಮಠವನ್ನು ಕಟ್ಟಿ, ಬೆಳೆಸಿ, ಅನ್ನ, ವಿದ್ಯೆಯನ್ನು ಕೊಡುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲ ಮಠಗಳೂ ಕೂಡಾ ಸಾಗುತ್ತಿವೆ. ಎಲ್ಲಾ ಮಠಗಳೂ ಕೂಡಾ ಒಂದೊಂದು ಶಾಲೆ ತೆರೆದು, ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಈ ಮೂಲಕ ಸರ್ಕಾರಕ್ಕೆ ಸಮಾನಾಂತರವಾದ ಕೆಲಸಗಳನ್ನು ಮಾಡುತ್ತಿವೆ. ವೀರಶೈವ ಮಠಗಳು ನಡೆಯುತ್ತಿರುವುದು ಭಕ್ತರ ಆಸರೆಯಿಂದಲೇ ಹೊರತು ಯಾವುದೇ ಸರ್ಕಾರದ ಅನುದಾನದಿಂದಲ್ಲ ಎಂದರು.ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಒಳ್ಳೆಯದನ್ನು ಮಾಡಲು, ಒಳ್ಳೆಯ ಮಾತು ಹೇಳಲು ದಿನಗಳ ವ್ಯತ್ಯಾಸವಿಲ್ಲ. ಒಳ್ಳೆಯದು ಜಗತ್ತಿನ ಎಲ್ಲ ಕಡೆಯಿಂದ ಹರಿದು ಬರಲಿ ಎನ್ನುವುದನ್ನು ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ. ವಿಕೃತಿಯನ್ನೇ ಸಂಸ್ಕೃತಿ ಎಂಬಂತೆ ಬಿಂಬಿಸಬಾರದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಿಪಟೂರು ತಾಲೂಕಿನ ಸಿಡ್ಲೇಹಳ್ಳಿ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶೀಕೇಂದ್ರ ಮಹಾ ಸ್ವಾಮೀಜಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಮಹಾ ಸಂಸ್ಥಾನದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮೀಜಿ, ಯಳನಾಡು ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀ ಮಠದ ಟ್ರಸ್ಟಿಗಳು, ಸ್ಥಳೀಯ ಜನಪ್ರತಿನಿಧೀಗಳು, ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.